ಚಾಮರಾಜನಗರ : ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣವು ಮಾತೃ, ಪಿತೃ, ತ್ಯಾಗ ಪರಿಪಾಲನೆಯಂತಹ ಉದಾತ್ತ ಮೌಲ್ಯವುಳ್ಳ ಮಹಾಕಾವ್ಯವಾಗಿದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು. ನಗರದ ಸರ್ಕಾರಿ ಪೇಟೆ ಪ್ರೈಮರಿ ಶಾಲಾ ಅವರಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಇಡೀ ಪ್ರಪಂಚವೇ ಮೆಚ್ಚುವಂತಹ ವಾಲ್ಮೀಕಿ ಅವರ ರಾಮಾಯಣದಲ್ಲಿ ಅನೇಕ ಉತ್ತಮ ವಿಚಾರಗಳಿವೆ. ಪ್ರಜಾಪ್ರಭುತ್ವದ ಬುನಾದಿ ಒಳಗೊಂಡ ಅಂಶಗಳು ಇವೆ. ತಂದೆ-ತಾಯಿ, ಸಹೋದರರ ಪ್ರೀತಿ, ಬಾಂಧವ್ಯ ಸೇರಿದಂತೆ ಇನ್ನೂ ಹಲವು ಮಹತ್ತರ ವಿಷಯಗಳನ್ನು ಒಳಗೊಂಡಂತೆ ಮಹಾಕಾವ್ಯ ರಾಮಾಯಣದಲ್ಲಿದೆ ಎಂದರು.
ಸಮಾಜದ ಅಂಕುಡೊಂಕು ತಿದ್ದಿ ಸರಿದಾರಿಯಲ್ಲಿ ನಡೆಸಲು ಮಹಾನ್ ಪುರುಷರ, ದಾರ್ಶನಿಕರ, ಸಂತರ ಜಯಂತಿ ಆಚರಣೆ ಮಾಡಲಾಗುತ್ತಿದೆ. ಇಡೀ ಮನುಕುಲದ ಒಳಿತಿಗಾಗಿ ಶ್ರಮಿಸಿದ ಮೇರುವ್ಯಕ್ತಿಗಳ ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನೆಡೆಯಬೇಕಿದೆ. ಕೋವಿಡ್ ಇನ್ನಿತರ ಕಾರಣಗಳಿಂದ ಕಳೆದ ಮೂರು ವರ್ಷಗಳಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ವಿಜೃಂಭಣೆಯಿಂದ ಕಾರ್ಯಕ್ರಮ ನಡೆದಿದೆ. ಅರ್ಥಪೂರ್ಣವೂ ಆಗಿದೆ. ವಾಲ್ಮೀಕಿಯವರ ಬಗ್ಗೆಸಾಕಷ್ಟು ವಿಚಾರಗಳನ್ನು ತಿಳಿಯಲು ಅವಕಾಶವಾಗಿದೆ ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ ರಾಮಾಯಣ ಪ್ರೀತಿ, ತ್ಯಾಗ, ತಪಸ್ಸು ಒಳಗೊಂಡ ಶ್ರೇಷ್ಠ ಗ್ರಂಥವಾಗಿದೆ. ರಾಮಾಯಣದ ಪಾತ್ರಗಳು ಮನುಷ್ಯ ಪ್ರೀತಿ, ಮಾನವತೆಯನ್ನು ಬಿಂಬಿಸುತ್ತವೆ. ನಡೆ, ನುಡಿಗಳಲ್ಲಿ ರಾಮಾಯಣವನ್ನು ರೂಢಿಸಿಕೊಳ್ಳಬೇಕಿದೆ. ಸತ್ಯ, ಸದಾಚಾರ ಹಾದಿಯಲ್ಲಿ ಮುನ್ನೆಡೆದು ಸಾರ್ಥಕತೆ ಜೀವನ ನಡೆಸಬೇಕು ಎಂದರು.
ಮುಖ್ಯ ಭಾಷಣ ಮಾಡಿದ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರಾದ ಡಾ. ನೀಲಗಿರಿ ತಳವಾರ ಮಾತನಾಡಿ ಮಹರ್ಷಿ ವಾಲ್ಮೀಕಿ ಅವರ ತಪಸ್ಸಿನ ಫಲಫಲವಾಗಿ ರಾಮಾಯಣ ಮಹಾಕಾವ್ಯ ಬರೆಯಲು ಸಾಧ್ಯವಾಯಿತು. ವಾಲ್ಮೀಕಿಯವರು ಪರಿವರ್ತನೆಯ ಸಂಕೇತವಾಗಿದ್ದಾರೆ. ಎಲ್ಲಿಯವರೆಗೆ ಪರಿವರ್ತನೆಗೆ ನಾವು ಒಡ್ಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಸಮಗ್ರ ಬದುಕು ಸಾಧ್ಯವಾಗುವುದಿಲ್ಲ ಎಂದರು.
ದ್ವಿತೀಯ ಪಿ.ಯು.ಸಿ. ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಹರ್ಷಿತಾ ಎಂ. ನಂದಿತಾ ಎಸ್.ಕೆ, ವರ್ಷಿತಾ ಪಿ, ಅವರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ಹಿರಿಯ ಕಲಾವಿದರಾದ ಘಟಂ ಕೃಷ್ಣ, ಸುರೇಶ್ ನಾಗ್, ಪತ್ರಕರ್ತರಾದ ಶ್ರೀನಿವಾಸ ನಾಯಕ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್, ಡಾ. ಪುಟ್ಟರಾಜು ಟಿ.ಎನ್ ಹಾಗೂ ಕೃಷ್ಣನಾಯಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಪ್ರವಾಸಿ ಮಂದಿರದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಅದ್ದೂರಿ ಮೆರವಣಿಗೆಗೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಚಾಲನೆ ನೀಡಿದರು. ಇತರೆ ಗಣ್ಯರು ಈ ಸಂದರ್ಭದಲ್ಲಿ ಇದ್ದರು.
