ಬೆಂಗಳೂರು: ಧರ್ಮಸ್ಥಳದಲ್ಲಿ ಅಸಹಜ ಸಾವು ಆರೋಪಕ್ಕೆ ಸಂಬಂಧಪಟ್ಟಂತೆ ಅನೇಕ ರೀತಿಯ ಬೆಳವಣಿಗೆಗಳು ಆಗುತ್ತಿದೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ಅವರು 24 ಕೊಲೆ ಮಾಡಿಸಿದ್ದಾರೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆನ್ನಲಾದ ಹೇಳಿಕೆ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಅವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.
ವಿಧಾನಸಭೆಯಲ್ಲಿಂದು ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಯಾರು ಧರ್ಮಸ್ಥಳದ ವಿರುದ್ಧ ನಿರಂತರವಾಗಿ ಅಪಚಾರ ಮಾಡುತ್ತಾ ಇದ್ದಾರೆಯೋ ಅದೇ ವ್ಯಕ್ತಿ, ಮುಖ್ಯಮಂತ್ರಿ ಸಿದ್ದರಾಮಯ್ಯ 24 ಕೊಲೆಗಳನ್ನು ಮಾಡಿದ್ದಾರೆಂದು ಆರೋಪಿಸಿದ್ದಾರೆ. ಆ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿಗೆ ಅವಮಾನ ಮಾಡಿದ್ದಾರೆ. ಧರ್ಮಸ್ಥಳದ ಬಗ್ಗೆ ಆರೋಪ ಬಂದ ಕೂಡಲೇ ಎಸ್ಐಟಿ ರಚನೆ ಮಾಡಿದ ಸರ್ಕಾರ ಈಗ ಸಿಎಂ ವಿಚಾರದಲ್ಲಿ ಬಂದ ಆರೋಪಕ್ಕೂ ಎಸ್ಐಟಿ ರಚನೆ ಮಾಡುತ್ತದೆಯೇ ಎಂದು ಪ್ರಶ್ನಿಸಿದರು.
ಧರ್ಮಸ್ಥಳ ಎಂದ ಕೂಡಲೇ ಎಸ್ಐಟಿ ರಚನೆ ಮಾಡಿದವರು ಸಿಎಂ ವಿರುದ್ಧದ ಆರೋಪದ ಬಗ್ಗೆ ಮಾತನಾಡುತ್ತಿಲ್ಲ. ಈ ಸರ್ಕಾರಕ್ಕೆ ಕಿವಿ ಇಲ್ಲ, ಮೌನಕ್ಕೆ ಶರಣಾಗತಿ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಇದಕ್ಕೆ ದನಿಗೂಡಿದ ಬಿಜೆಪಿ ಸದಸ್ಯ ಸುರೇಶ್ ಹಾಗೂ ಇತರರು, ಧಾರ್ಮಿಕ ಕ್ಷೇತ್ರದ ಬಗ್ಗೆ ಯಾರೇ ಒಳ್ಳೆಯ ಮಾತುಗಳನ್ನಾಡಿದರೂ ಅವರ ಚಾರಿತ್ರ್ಯಹರಣ ಮಾಡುವ ಮೂಲಕ ಬಾಯಿ ಮುಚ್ಚಿಸುವ ಷಡ್ಯಂತ್ರ ರೂಪಿಸುತ್ತಿರುವ ಅಪಾಯಕಾರಿ ಮನಃಸ್ಥಿತಿ ಹೊಂದಿರುವ ಮಹೇಶ್ ಶೆಟ್ಟಿ ತಿಮರೋಡಿಯನ್ನು ತಕ್ಷಣ ಬಂಧಿಸಿ ಕಾನೂನಾತ್ಮಕ ಶಿಕ್ಷೆಗೆ ಒಳಪಡಿಸಬೇಕು ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಈ ಸದಸ್ಯದಲ್ಲಿ ಅವರ ಹೆಸರು ಹೇಳಿ ಹಿರೋ ಮಾಡುವುದು ಬೇಡ. ಆತ ಸಿಎಂ ಮಾತ್ರವಲ್ಲದೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಗ್ಗೆಯೂ ಹೇಳಿದ್ದಾರೆ. ಸರ್ಕಾರ ಎಲ್ಲವನ್ನೂ ಗಮನಿಸುತ್ತಿದೆ. ಗೃಹ ಇಲಾಖೆ ದಿಟ್ಟ ಕ್ರಮ ಕೈಗೊಳ್ಳಲಿದೆ ಎಂದರು.
ಆನಂತರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಈಗಾಗಲೇ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಹತ್ತಾರು ಕೇಸ್ ದಾಖಲು ಮಾಡಲಾಗಿದೆ. ಆತನ ಹೇಳಿಕೆ ಸಂಬಂಧಿಸಿದಂತೆ ಕಾನೂನು ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಆದರೆ ಮಹೇಶ್ ಶೆಟ್ಟಿ ತಿಮರೋಡಿ ನೀಡಿರುವ ಹೇಳಿಕೆಯನ್ನು ತಿರುಚಲಾಗಿದ್ದು, ಇದೇ ವಿಡಿಯೋ ಕುರಿತು ಸದನದಲ್ಲಿ ಚರ್ಚೆಯಾಗಿದೆ. ವಾಸ್ತವದಲ್ಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ ನೀಡಿದ್ದ ಹೇಳಿಕೆಯನ್ನು ಪ್ರಸ್ತಾಪಿಸಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅವರ ವಿಡಿಯೋವನ್ನು ಎಡಿಟ್ ಮಾಡಿ ವೈರಲ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.