ಬೆಂಗಳೂರು: ಕಾಂಗ್ರೆಸ್ ಆಯ್ಕೆ ಮಾಡಿದ ಜನರಲ್ಲಿ ಹೆಚ್ಚಿನ ಅಂಶ ಅಂಶ ಹಿಂದೂಗಳೇ ಇದ್ದಾರೆ. ನಾವು ಹೇಗೆ ಹಿಂದೂ ವಿರೋಧಿ ಆಗುತ್ತೇವೆ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್ ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಬಕ್ರೀದ್ ಹಬ್ಬದಲ್ಲಿ ಭಾಗಿಯಾಗಿದ್ದ ಪರಮೇಶ್ವರ್, ಅಲ್ಲಾನ ಕೃಪೆಯಿಂದಲೇ ಕಾಂಗ್ರೆಸ್ ಗೆದ್ದಿದೆ, ನಿಮ್ಮ ಆಶೀರ್ವಾದದಿಂದಲೇ ನಾನು ಗೃಹಮಂತ್ರಿಯಾಗಿದ್ದೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮುಸ್ಲಿಂ ಮತಗಳಿಂದಲೇ ಕಾಂಗ್ರೆಸ್ ಗೆದ್ದಿದೆ ಎಂದು ಹೇಳಿಕೆ ನೀಡಿದ್ದರು.
ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಬೆಂಗಳೂರಿನಲ್ಲಿ ತಿರುಗೇಟು ನೀಡಿದ ಅವರು, ಹೇಳುವುದಕ್ಕೂ ಒಂದು ಮಿತಿ ಇರಬೇಕು. ಇಂತಹ ವಿಷಯಗಳಲ್ಲಿ ನಾವು ನ್ಯಾಯವಾಗಿ ಹೋಗಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ದತ್ತಪೀಠ ಹೋರಾಟಗಾರರ ವಿರುದ್ಧದ ಪ್ರಕರಣವನ್ನು ರೀ ಓಪನ್ ಮಾಡಿ ಕ್ರಮಕ್ಕೆ ಮುಂದಾದ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ನಾನು ಕೇಸ್ ರೀ ಓಪನ್ ಮಾಡಿಲ್ಲ. ಪೊಲೀಸ್ ಠಾಣೆಯಲ್ಲಿ ಇರುವ ಪ್ರಕರಣಗಳ ವಿರುದ್ಧ ಅಧಿಕಾರಿ ಕ್ರಮ ತೆಗೆದುಕೊಳ್ಳಲು ಹೋದರೆ ರೀ ಓಪನ್ ಮಾಡಿದ್ದೀರಾ ಅಂತ ಕೇಳಿದರೆ ಹೇಗೆ? ಕೋರ್ಟ್ ಸೂಚನೆ ಕೊಟ್ಟಿದ್ದರೆ ನಾವು ಕೇಳಬಾರದಾ? ಬಿಜೆಪಿಯವರು ಕೋರ್ಟ್, ಕಾನೂನಿಗೂ ಬೆಲೆ ಕೊಡುವುದಿಲ್ಲ ಎಂದರು.
16 ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಯ ವಿಷಯಕ್ಕೆ ಇಷ್ಟು ದೊಡ್ಡದು ಮಾಡಿ ಇಡೀ ದೇಶದಲ್ಲಿ ದೊಡ್ಡದು ಮಾಡಲು ಹೊರಟಿದ್ದೀರಾ? ಬಿಜೆಪಿಯವರು ಅಪರಾಧಿಯನ್ನ ಬೆಂಬಲಿಸುತ್ತಿದ್ದಾರೆ. ಒಂಬತ್ತು ಸಾರಾಯಿ ಕೇಸ್ ಸೇರಿದಂತೆ ಬೇರೆ ಬೇರೆ ಪ್ರಕರಣಗಳು ಆತನ ಮೇಲಿದೆ. ಅ ಲೀಸ್ಟ್ನಲ್ಲಿ ಬೇರೆ ಹಿಂದೂಗಳು ಇದ್ದಾರೆ ಅಲ್ಲವಾ? ಎಂದು ಪರಮೇಶ್ವರ್ ಕಿಡಿಕಾರಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಚಿವರ ಸಭೆ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ಡಿನ್ನರ್ ಮೀಟಿಂಗ್ ಇತ್ತು, ಊಟ ಮಾಡಿ ಬಂದೆ. ರಾಜಕೀಯ ಬಗ್ಗೆಯೂ ಚರ್ಚೆ ಆಗಿದೆ. ಅದನ್ನು ಬಹಿರಂಗಪಡಿಸಲು ಆಗುತ್ತಾ? ನಾವು ರಾಜಕಾರಣಿಗಳು, ರಾಜಕೀಯ ಬಗ್ಗೆ ಮಾತಾಡಿಯೇ ಇರುತ್ತೇವೆ ಎಂದರು.
ಚುನಾವಣೆ ಮೊದಲು ಚಿತ್ರದುರ್ಗದಲ್ಲಿ ಎಸ್ ಸಿ ಎಸ್ ಟಿ ಸಮಾವೇಶ ಮಾಡಿ 10 ನಿರ್ಣಯಗಳನ್ನು ತೆಗೆದುಕೊಂಡಿದ್ದೆವು. ಸರ್ಕಾರ ಬಂದಾಗ ಅದನ್ನ ಮಾಡುತ್ತೇವೆ ಅಂತ ಘೋಷಣೆ ಮಾಡಿದ್ದೆವು. ಈಗ ಸರ್ಕಾರ ಬಂದಿದೆ. ಅದನ್ನ ಜಾರಿ ಮಾಡಬೇಕು. ಅ ಬಗ್ಗೆಯೂ ಚರ್ಚೆ ಮಾಡಿದ್ದೇವೆ ಎಂದರು.