ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಜ. ೧೫ ರಂದು ನಡೆಯಲಿರುವ ಚಿಕ್ಕಜಾತ್ರೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಸಲಹೆ ನೀಡಿದರು.
ಅವರು ಸೋಮವಾರ ರಾತ್ರಿ ತಾಲೂಕಿನ ಬಿಳಿಗಿರಿರಂಗನಬೆಟ್ಟದ ಅತಿಗಣ್ಯರ ವಸತಿಗೃಹದಲ್ಲಿ ನಡೆದ ಸಂಕ್ರಾಂತಿ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜ. ೧೫ ರಂದು ಸಂಕ್ರಾಂತಿ ರಥೋತ್ಸವ: ಸಂಕ್ರಾಂತಿ ಹಬ್ಬದ ಮಾರನೇ ದಿನ ಬೆಟ್ಟದಲ್ಲಿ ಚಿಕ್ಕತೇರು ನಡೆಯುತ್ತದೆ. ಈ ಬಾರಿ ಜ. ೧೫ ರ ಬುಧವಾರ ಮಧ್ಯಾಹ್ನ ೧೧.೫೫ ರಿಂದ ೧೨.೦೬ ರೊಳಗೆ ಸಲ್ಲುವ ಮೀನಾ ಲಗ್ನದಲ್ಲಿ ರಥಾರೋಹಣ ಆರಂಭವಾಗಲಿದೆ. ರಥಾರೋಹಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು ಇಲ್ಲಿ ಭಕ್ತರಿಗೆ ತೊಂದರೆಯಾಗದಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಬಾರಿ ೮೦ ಬಸ್ಸು: ಬೆಟ್ಟದ ಜಾತ್ರೆಗೆ ಈ ಬಾರಿ ಕೆಸ್ಸಾರ್ಟಿಸಿ ವತಿಯಿಂದ ಒಟ್ಟು ೮೦ ಬಸ್ಸುಗಳನ್ನು ಓಡಿಸಲಾಗುತ್ತಿದೆ. ಇದರಲ್ಲಿ ಯಳಂದೂರು ಪಟ್ಟಣದಿಂದ ೭೫ ಬಸ್‌ಗಳು ಹಾಗೂ ಚಾಮರಾಜನಗರದಿಂದ ೫ ಬಸ್‌ಗಳನ್ನು ಓಡಿಸಲಾಗುವುದು. ಅಲ್ಲದೆ ಜಾತ್ರೆಯ ಅಂಗವಾಗಿ ಕೊಳ್ಳೇಗಾಲ, ಚಾಮರಾಜನಗರ, ಮೈಸೂರು, ಗುಂಡ್ಲುಪೇಟೆಯಿಂದಲೂ ವಿಶೇಷ ಬಸ್‌ಗಳನ್ನು ಓಡಿಸಲಾಗುವುದು. ಇದರೊಂದಿಗೆ ನಾಲ್ಕು ಚಕ್ರದ ವಾಹನಗಳಲ್ಲಿ ಬರುವ ಭಕ್ತರು ಇವರಿಗೆ ನಿಗಧಿಯಾಗಿರು ಸ್ಥಳದಲ್ಲಿ ತಮ್ಮ ವಾಹನವನ್ನು ನಿಲ್ಲಿಸಿ ಇಲ್ಲಿಂದ ದೇಗುಲಕ್ಕೆ ತೆರಳಲು ವಿಶೇಷ ಬಸ್‌ಗಳನ್ನು ಬಿಡಲಾಗುವುದು ಎಂದು ಮಾಹಿತಿ ನೀಡಿದರು.
ಈ ಬಾರಿಯೂ ದ್ವಿಚಕ್ರ, ತ್ರಿಚಕ್ರ, ಗೂಡ್ಸ್ ವಾಹನ ನಿಷೇಧ: ಈ ಬಾರಿಯೂ ಬೆಟ್ಟಕ್ಕೆ ತೇರಿನ ದಿನ ವಾಹನದ ದಟ್ಟಣೆಯನ್ನು ತಡೆಗಟ್ಟಲು ದ್ವಿಚಕ್ರ, ತ್ರಿಚಕ್ರ ಹಾಗೂ ಗೂಡ್ಸ್ ವಾಹನಗಳನ್ನು ನಿಷೇಧಿಸಲಾಗಿದೆ. ಇದರಲ್ಲಿ ಬರುವ ಭಕ್ತರು ತಾಲೂಕಿನ ಅರಣ್ಯ ಇಲಾಖೆಯ ಗುಂಬಳ್ಳಿ ಚೆಕ್ ಪೋಸ್ಟ್‌ನ ಬಳಿ ತಮ್ಮ ವಾಹನ ನಿಲ್ಲಿಸಿ ಬಸ್‌ಗಳಲ್ಲೇ ತೆರಳಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.
ಇಲ್ಲಿ ಪ್ರತಿ ವರ್ಷವೂ ಎರಡು ಬಾರಿ ರಥೋತ್ಸವ ನಡೆಯುತ್ತದೆ. ಇಲ್ಲಿಗೆ ಮೈಸೂರು ಮಹಾರಾಜರೂ ಸೇರಿದಂತೆ ಅನೇಕರು ನೀಡಿರುವ ರತ್ನ ಖಚಿತ ಕಿರೀಟ ಸೇರಿದಂತೆ ಇತರೆ ಚಿನ್ನದ ಒಡವೆಗಳನ್ನು ಹಾಕಲಾಗುತ್ತದೆ. ಇದನ್ನು ಪಟ್ಟಣದ ಉಪ ಖಜಾನೆಯಲ್ಲಿ ಇಡಲಾಗುತ್ತದೆ. ಒಟ್ಟು ೬ ಪೆಟ್ಟಿಗೆಗಳಲ್ಲಿ ಚಿನ್ನವನ್ನು ಶೇಖರಿಸಿ ಇಡಲಾಗಿದೆ. ಆದರೆ ಪ್ರತಿ ವರ್ಷವೂ ಕೇವಲ ೪ ಪೆಟ್ಟಿಗೆಗಳಲ್ಲಿರುವ ಒಡವೆಗಳನ್ನು ಹಾಕಲಾಗುತ್ತಿದೆ. ಇನ್ನೆರಡು ಪೆಟ್ಟಿಗೆಗಳನ್ನು ತೆರೆಯುತ್ತಿಲ್ಲ. ಇದರ ಬಗ್ಗೆ ಮಾಹಿತಿ ನೀಡಿ, ಇದನ್ನು ತೆಗೆದು ಇಲ್ಲಿರು ಒಡವೆಗಳ ಬಗ್ಗೆ ಮಾಹಿತಿ ನೀಡಿ, ಇದನ್ನು ಕೂಡ ತೆರೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಹುಡೇದಾ ರವರಿಗೆ ಸೂಚನೆ ನೀಡಿದರು. ಈ ಬಗ್ಗೆ ಕ್ರಮ ವಹಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.
ಅಪರ ಜಿಲ್ಲಾಧಿಕಾರಿ ಗೀತಾಹುಡೇದಾ, ಉಪವಿಭಾಗಾಧಿಕಾರಿ ಬಿ.ಆರ್. ಮಹೇಶ್, ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಉಪಾಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ತಹಶೀಲ್ದಾರ್ ಜಯಪ್ರಕಾಶ್, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಡಿವೈಎಸ್‌ಪಿ ಎಂ. ಧರ್ಮೇಂದ್ರ, ಸಿಪಿಐ ಕೆ. ಶ್ರೀಕಾಂತ್, ಆರ್‌ಎಫ್‌ಒ ನಾಗೇಂದ್ರನಾಯಕ ಬೆಟ್ಟದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ಕುಮಾರ್, ಪಾರುಪತ್ತೇದಾರ ರಾಜು, ಶೇಷಾದ್ರಿ ಅರ್ಚಕ ರವಿಕುಮಾರ್, ಎಸ್. ನಾಗೇಂದ್ರಭಟ್ ವ್ಯವಸ್ಥಪನಾ ಸಮಿತಿ ಸದಸ್ಯರಾದ ಗುಂಬಳ್ಳಿ ರಾಜಣ್ಣ, ಜೆ. ಶ್ರೀನಿವಾಸ್, ಕೇತಮ್ಮ, ಸ್ಪೂರ್ತಿ, ವೆಂಕಟರಾಮು, ಸಿದ್ದರಾಜು, ಎಂ. ಸುರೇಶ್, ವಿ. ನಾರಾಯಣಸ್ವಾಮಿ ಪಿಎಸ್‌ಐ ಹನುಮಂತ ಉಪ್ಪಾರ್, ವೆಂಕಟೇಶ್, ಗ್ರಾಪಂ ಅಧ್ಯಕ್ಷ ಸಿ.ಡಿ. ಮಹದೇವ, ಸದಸ್ಯರಾದ ಪ್ರತೀಪ್‌ಕುಮಾರ್, ಸಾಕಮ್ಮ ಸೇರಿದಂತೆ ಹಲವರು ಇದ್ದರು.