Friday, April 18, 2025
Google search engine

Homeಸ್ಥಳೀಯಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಒದಗಿಸಿ: ವೆಂಕಟ್ ರಾಜಾ

ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಒದಗಿಸಿ: ವೆಂಕಟ್ ರಾಜಾ


ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕರ ತಪಾಸಣೆ ನಡೆಸಿ, ಸಮೀಕ್ಷೆಯಲ್ಲಿ ಪತ್ತೆಯಾದ ಬಾಲ ಕಾರ್ಮಿಕರನ್ನು ಜಿಲ್ಲೆಯಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಯ ಬಾಲಕರ ಹಾಗೂ ಬಾಲಕಿಯರ ಬಾಲಮಂದಿರಗಳಲ್ಲಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ವಸತಿ ಶಾಲೆಗಳಲ್ಲಿ ಹಾಗೂ ಮುಖ್ಯವಾಹಿನಿ ಶಾಲೆಗಳಲ್ಲಿ ದಾಖಲಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಸಂಬಂಧ ಗುರುವಾರ ನಡೆದ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕರ ಕಾಯ್ದೆಯಂತೆ ತಪಾಸಣೆ ಕೈಗೊಂಡ ವರದಿಯನ್ನು ಪ್ರತೀ ಮಾಹೆ ಒದಗಿಸುವಂತೆ ಕಾರ್ಮಿಕ ಅಧಿಕಾರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಯಾವುದೇ ಕ್ಷೇತ್ರದಲ್ಲಿ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳಬಾರದು. ೧೪ ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಶಿಕ್ಷಣ ನಿಡಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ ತಪಾಸಣೆಯನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
‘ಪ್ರತಿಯೊಬ್ಬ ಮಕ್ಕಳಿಗೂ ಶಿಕ್ಷಣ ದೊರೆತಲ್ಲಿ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ. ಮಕ್ಕಳು ಶಿಕ್ಷಣದಿಂದ ವಂಚಿತರಾದಲ್ಲಿ ಸಮಾಜದ ಅಭಿವೃದ್ಧಿಗೆ ಹಿನ್ನೆಡೆ ಎಂಬುದನ್ನು ಪ್ರತಿಯೊಬ್ಬರೂ ತಿಳಿಯಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.’
ಹೋಟೆಲ್, ಅಂಗಡಿ, ಕಾರ್ಖಾನೆ, ಕಲ್ಲುಕೋರೆ ಹೀಗೆ ಯಾವುದೇ ಕ್ಷೇತ್ರದಲ್ಲಿ ಬಾಲ ಕಾರ್ಮಿಕರು ಕಂಡು ಬರಬಾರದು. ಕಂಡುಬಂದಲ್ಲಿ ನಿಯಮಾನುಸಾರ ಕ್ರಮವಹಿಸಬೇಕು. ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸಲಹೆ ಮಾಡಿದರು. ಕಾರ್ಮಿಕ ಇಲಾಖೆ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿ ಬೀದಿನಾಟಕ ಮೂಲಕ ಹೆಚ್ಚಿನ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಹರ್ಷವರ್ಧನ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕರ ಸಮೀಕ್ಷೆ ಕೈಗೊಳ್ಳಲಾಗಿದ್ದು, ಆ ನಿಟ್ಟಿನಲ್ಲಿ ಕಳೆದ ಮೂರುವರೆ ತಿಂಗಳಲ್ಲಿ ಹೋಟೆಲ್, ಅಂಗಡಿ, ಕಾರ್ಖಾನೆ, ಕಲ್ಲುಕೋರೆ, ತೋಟ, ಸೇರಿದಂತೆ ಸುಮಾರು ೫,೦೭೭ ವಿವಿಧ ಸಂಸ್ಥೆಗಳಲ್ಲಿ ಸಮೀಕ್ಷಾ ಕಾರ್ಯ ಕೈಗೊಂಡು ೮ ಸಂಸ್ಥೆಯಲ್ಲಿ ೧೧ ಮಕ್ಕಳನ್ನು ಗುರುತಿಸಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ಕಳೆದ ವರ್ಷ ೩೦೪ ಕಡೆಗಳಲ್ಲಿ ತಪಾಸಣೆ ಕೈಗೊಳ್ಳಲಾಗಿತ್ತು, ಇದರಲ್ಲಿ ೧೦ ಪ್ರಕರಣ ದಾಖಲಿಸಿ ೩ ಪ್ರಕರಣಕ್ಕೆ ಸುಮಾರು ೪೪,೦೦೦ ದಂಡವನ್ನು ನ್ಯಾಯಾಲಯ ಮೂಲಕ ವಿಧಿಸಲಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಹರ್ಷವರ್ಧನ್ ಅವರು ಮಾಹಿತಿ ನೀಡಿದರು.
ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದಂದು ಆಟೋಗಳಿಗೆ ಬ್ಯಾನರ್ ಕಟ್ಟಿ ಜಿಂಗಲ್ಸ್‌ಗಳ ಮೂಲಕ ಪ್ರಚಾರ ಕೈಗೊಳ್ಳಲಾಗಿದೆ. ಬಾಲಕಾರ್ಮಿಕ ಪದ್ಧತಿ ದುಷ್ಪರಿಣಾಮ ಹಾಗೂ ಶಿಕ್ಷಣದ ಮಹತ್ವದ ಬಗ್ಗೆ ಮಾಹಿತಿ ಒಳಗೊಂಡ ೨-೩ ನಿಮಿಷದ ವಿಡಿಯೋ ಮಾಡಿಸಿ ಜಾಗೃತಿ ಮೂಡಿಸಲಾಗಿದೆ ಎಂದರು.
ಜಿಲ್ಲೆಯಲ್ಲಿರುವ ಕೊಡಗು ಪ್ಲಾಂಟರ್‍ಸ್ ಅಸೋಷಿಯೇಷನ್, ಕರ್ನಾಟಕ ಪ್ಲಾಂಟರ್‍ಸ್ ಅಸೋಸಿಯೇಷನ್ ಸದಸ್ಯರನ್ನು ಒಟ್ಟುಗೂಡಿಸಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಕ್ಕಳು ಕೆಲಸ ಮಾಡುತ್ತಿರುವುದು ಕಂಡು ಬಂದರೆ ಮಕ್ಕಳ ವಯಸ್ಸು, ವಾಸಿಸುವ ಸ್ಥಳ, ವಿದ್ಯಾಭ್ಯಾಸದ ಮಟ್ಟ ಇವುಗಳ ಮಾಹಿತಿಯನ್ನು ವಿಚಾರಿಸುವ ಬಗ್ಗೆ ಸಂಬಂಧಪಟ್ಟ ಎಲ್ಲಾ ಇಲಾಖಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಚೈಲ್ಡ್‌ಲೈನ್-೧೦೯೮ ರ ಬಗ್ಗೆ ಬಾಲಕಾರ್ಮಿಕ ಪದ್ಧತಿ ಬಗ್ಗೆ ಕಿರುಚಿತ್ರಗಳನ್ನು ಸಿದ್ಧಪಡಿಸಿ ಪ್ರತಿ ಶಾಲೆಗಳಿಗೆ ಕಳುಹಿಸಿ ಇವುಗಳನ್ನು ಪ್ರತಿ ಶಾಲೆಗಳಲ್ಲಿ ಭಿತ್ತರಿಸುವ ಮೂಲಕ ಮಕ್ಕಳಲ್ಲಿ ಹೆಚ್ಚಿನ ಅರಿವು ಮೂಡಿಸಲಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಅವರು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರಾದ ಸಿ.ರಂಗಧಾಮಯ್ಯ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್, ಲೋಕೋಪಯೋಗಿ ಇಲಾಖೆಯ ಇಇ ಸಿದ್ದೇಗೌಡ, ಸೆಸ್ಕ್ ಎಇಇ ದೇವಯ್ಯ, ಜಿ.ಪಂ.ಸಹಾಯಕ ಕಾರ್ಯದರ್ಶಿ ಜೀವನ್ ಕುಮಾರ್, ಕೈಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ರಘು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕರಾದ ಕವಿತಾ, ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟ್ಟಿ, ಕೆ.ಎನ್.ಲೀನಾ, ನಿಕಿಲ್‌ಚಂದ್ರ, ವಿಶೇಷ ಮಕ್ಕಳ ರಕ್ಷಣಾ ಘಟಕದ ಮಹೇಶ್, ಉಪ ವಿಭಾಗಾಧಿಕಾರಿ ಕಚೇರಿಯ ಶಿರಸ್ತೇದಾರರಾದ ಪ್ರವೀಣ್ ಕುಮಾರ್, ವಿಶೇಷ ಮಕ್ಕಳ ರಕ್ಷಣಾ ಪೊಲೀಸ್ ಘಟಕದ ನೋಡಲ್ ಅಧಿಕಾರಿ ಎಂ.ಬಿ.ಸುಮತಿ, ಮಕ್ಕಳ ಕಲ್ಯಾಣ ಸಮಿತಿಯ ಶಿರಾಜ್ ಅಹಮ್ಮದ್, ಇತರರು ಇದ್ದರು.

RELATED ARTICLES
- Advertisment -
Google search engine

Most Popular