ಬೆಂಗಳೂರು: ಕಾಂಗ್ರೆಸ್ ಸರ್ಕಾರ ಕಳೆದ ವಿಧಾನಸಭಾ ಚುನಾವಣೆ ವೇಳೆ ನೀಡಿದ್ದ ಪಂಚ ಗ್ಯಾರಂಟಿಗಳನ್ನು ಈಡೇರಿಸಿದ್ದು ಗೃಹಲಕ್ಷ್ಮೀ, ಶಕ್ತಿ ಯೋಜನೆ, ಯುವ ನಿಧಿ, ಅನ್ನ ಭಾಗ್ಯ ಹಾಗೂ ಗೃಹ ಜ್ಯೋತಿ ಯೋಜನೆ ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಯಲ್ಲಿದೆ. ಕಳೆದ ಒಂದು ವರ್ಷ ರಾಜ್ಯದ ಜನರಿಗೆ ಸರ್ಕಾರ ಈ ಯೋಜನೆಗಳನ್ನು ಉಚಿತವಾಗಿ ನೀಡುತ್ತಿದ್ದು, ಹಲವು ಫಲಾನುಭವಿಗಳು ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಪೈಕಿ ಗೃಹಲಕ್ಷ್ಮೀ ಯೋಜನೆ ಆರಂಭವಾಗಿ ಒಂದು ವರ್ಷವಾಗಿದ್ದು, ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಪಡೆಯುತ್ತಿರುವ ಮಹಿಳೆಯರಿಗೆ, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರ್ಜರಿ ಆಫರ್ ನೀಡಿದ್ದಾರೆ. ಈ ಬಗ್ಗೆ ಸ್ವತಃ ಸಚಿವರೇ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಗೃಹಲಕ್ಷ್ಮೀಯರು ಏನು ಮಾಡಬೇಕು ಎನ್ನುವ ಸಂಪೂರ್ಣ ಮಾಹಿತಿ ನೀಡಿದ್ದಾರೆ.
‘ಇಂದಿಗೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆ ಜಾರಿಗೆ ಬಂದು ಒಂದು ವರ್ಷ ಆಯ್ತು. ಈ ಸಂದರ್ಭದಲ್ಲಿ ಕುಟುಂಬದ ಯಜಮಾನಿಯರಿಗೆ ಹಾಗೂ ನನ್ನ ಗೃಹಲಕ್ಷ್ಮೀಯರಿಗೆ ಶುಭಾಶಯಗಳನ್ನು ತಿಳಿಸುತ್ತೇನೆ. ಹಾಗೂ ಅಭಿನಂದನೆಗಳನ್ನು ತಿಳಿಸುತ್ತೇನೆ. ಇಲ್ಲಿಯವರೆಗೂ ಗೃಹಲಕ್ಷ್ಮೀಯು ತಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆಯನ್ನು ಈ ಒಂದು ವರ್ಷದಲ್ಲಿ ತಂದಿದೆ.
ಈ ಬದಲಾವಣೆಯನ್ನು ರೀಲ್ಸ್ ಮಾಡುವುದರ ಮೂಲಕ ಯೂಟ್ಯೂಬ್‌ನಲ್ಲಿ ಈ ಬಗ್ಗೆ ಸಂಪೂರ್ಣ ವಿವರ ನಮ್ಮೊಂದಿಗೆ ಹಂಚಿಕೊಳ್ಳಿ. ಯಾರ ರೀಲ್ಸ್ ಜಾಸ್ತಿ ಓಡುತ್ತದೆಯೋ, ಜಾಸ್ತಿ ವಿವ್ಸ್ ಸಿಗುತ್ತದೆಯೋ ಅಂತಹ ಕುಟುಂಬಕ್ಕೆ, ಅಂತಹ ಯಜಮಾನಿಗೆ, ಅಂತಹ ಗೃಹಲಕ್ಷ್ಮೀಗೆ ನಿಮ್ಮ ಲಕ್ಷ್ಮೀ ಹೆಬ್ಬಾಳ್ಕರ್ ಕಡೆಯಿಂದ ಒಂದು ಬಹುಮಾನ ನೀಡಲಾಗುತ್ತದೆ’ ಎಂದು ಸಚಿವರು ತಿಳಿಸಿದ್ದಾರೆ.
ಅಲ್ಲದೇ ‘ಒಂದು ತಿಂಗಳು ಅಂದರೆ ಸೆಪ್ಟೆಂಬರ್ 31ರವರೆಗೂ ನಿಮ್ಮ ರೀಲ್ಸ್‌ಗಳನ್ನು ಯೂಟ್ಯೂಬ್, ಫೇಸ್ ಬುಕ್, ಇನ್ ಸ್ಟಾಗ್ರಾಮ್‌ಗಳಲ್ಲಿ ಹಂಚಿಕೊಳ್ಳಿ. ಜಾಸ್ತಿ ವಿವ್ಸ್ ಸಿಕ್ಕವರಿಗೆ ನನ್ನ ಕಡೆಯಿಂದ ಒಂದು ಬಹುಮಾನವನ್ನು ಕೊಡುತ್ತೇನೆ. ಮೊದಲ ಐವತ್ತು ಜನರ ದಾರಿಯನ್ನು ಕಾಯುತ್ತಿದ್ದೇನೆ. ರೀಲ್ಸ್ ಮೂಲಕ ಗೃಹಲಕ್ಷ್ಮೀ ಯೋಜನೆಯಿಂದ ತಮ್ಮ ಜೀವನದಲ್ಲಿ ಆದ ಬದಲಾವಣೆಯನ್ನು ನಮ್ಮೆಲ್ಲಾ ಕರ್ನಾಟಕದ ಜನತೆ ಜೊತೆ ಹಂಚಿಕೊಳ್ಳಿ, ಬಹುಮಾನ ಗೆಲ್ಲಿ’ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕರೆ ನೀಡಿದ್ದಾರೆ.