ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಪಿಓಪಿ ಗಣೇಶ ತಯಾರಿಕೆ ಎಗ್ಗಿಲ್ಲದೆ ನಡೆತಿದೆ.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಆದೇಶದ ಮೇರೆಗೆ 2016ರಲ್ಲಿ ರಾಜ್ಯದಲ್ಲಿ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ- ಮಾರಾಟಕ್ಕೆ ನಿಷೇಧ ಜಾರಿ ಮಾಡಲಾಗಿದೆ.
ನಿಷೇಧದ ನಡುವೆಯೂ ಅಕ್ರಮವಾಗಿ ಪಿಒಪಿ ಗಣೇಶ ಮೂರ್ತಿ ತಯಾರಿಕೆ ಮಾಡಲಾಗುತ್ತಿದ್ದು, ಕಿರುಗಂದೂರು ಗ್ರಾಮದಲ್ಲಿ ನಡೆಯುತ್ತಿದ್ದ ಪಿಒಪಿ ಗಣೇಶ ಮೂರ್ತಿ ತಯಾರಿಕೆ ಘಟಕದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಂಡ್ಯ ತಾಲೂಕಿನ ಇಂಡವಾಳು ಗ್ರಾ.ಪಂ ವ್ಯಾಪ್ತಿಯ ಕಿರುಗಂದೂರು ಗ್ರಾಮದ ಕೋಳಿ ಸಾಕಾಣಿಕೆಯ ಶೆಡ್ ಒಂದರಲ್ಲಿ ಪಿಒಪಿ ಗಣೇಶ ಮೂರ್ತಿ ತಯಾರಿಸಲಾಗುತ್ತಿತ್ತು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಗ್ರಾ.ಪಂ. ಅಧಿಕಾರಿಗಳಿಂದ ದಾಳಿ ನಡೆಸಿ, ಸುಮಾರು 100ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.

ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಭವ್ಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಮೇಲ್ಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಮೇಲಾಧಿಕಾರಿಗಳ ಸೂಚನೆ ಮೇರೆಗೆ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿ ಮನುಜ, ಇಂಡುವಾಳು ಗ್ರಾ. ಪಂ. ಕಾರ್ಯದರ್ಶಿ ಮರಲಿಂಗಯ್ಯ ಭಾಗಿಯಾಗಿದ್ದರು.