Saturday, April 19, 2025
Google search engine

Homeರಾಜ್ಯಸುದ್ದಿಜಾಲಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವೆ -ಶಾಸಕ ಡಿ.ರವಿಶಂಕರ್

ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವೆ -ಶಾಸಕ ಡಿ.ರವಿಶಂಕರ್

ಅಹವಾಲು ಆಲಿಸುವ ಜನತಾ ದರ್ಶನ ಕಾರ್ಯಕ್ಕೆ ಚಾಲನೆ

ವಿನಯ್ ದೊಡ್ಡಕೊಪ್ಪಲು

ಕೆ. ಆರ್.ನಗರ: ಮುಂದಿನ ದಿನಗಳಲ್ಲಿ ಪ್ರತಿ ಶುಕ್ರವಾರ ಸಾರ್ವಜನಿಕರ ಸಮಸ್ಯೆ ಆಲಿಸಿ ಅವುಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ಹಾಸನ-ಮೈಸೂರು ರಸ್ತೆಯಲ್ಲಿರುವ ಶಾಸಕರ ಕಛೇರಿಯಲ್ಲಿ ಕ್ಷೇತ್ರದ ನಾಗರೀಕರಿಂದ ಅಹವಾಲು ಆಲಿಸುವ ಜನತಾ ದರ್ಶನ ಕಾರ್ಯಕ್ಕೆ ಚಾಲನೆ ನೀಡಿ ಜನರ ಸಮಸ್ಯೆ ಆಲಿಸಿ ಮಾತನಾಡಿದ ಅವರು ಮತದಾರ ಪ್ರಭುಗಳು ಯಾವುದೇ ಸಾರ್ವಜನಿಕ ಸಮಸ್ಯೆಗಳಿದ್ದರೂ ನೇರವಾಗಿ ನನ್ನನ್ನು ಸಂಪರ್ಕಿಸಬಹುದು ಎಂದರು.
ಕೆ.ಆರ್.ನಗರ ಪಟ್ಟಣದಲ್ಲಿ ಸಮಸ್ಯೆ ಆಲಿಸುವುದರ ಜತೆಗೆ ಸಾಲಿಗ್ರಾಮ ತಾಲೂಕು ಕೇಂದ್ರದಲ್ಲಿಯೂ ತಿಂಗಳಲ್ಲಿಯೂ ಒಂದು ಅಥವಾ ಎರಡು ಶುಕ್ರವಾರ ಜನತಾ ದರ್ಶನ ನಡೆಸಲಾಗುತ್ತದೆ ಎಂದು ಪ್ರಕಟಿಸಿದ ಶಾಸಕರು ಸರ್ಕಾರದ ಯೋಜನೆಗಳನ್ನು ಅರ್ಹರ ಮನೆ ಬಾಗಿಲಿಗೆ ತಲುಪಿಸಿ ಕ್ಷೇತ್ರದ ಜನರ ಆಶಯಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆಂದು ಭರವಸೆ ನೀಡಿದರು.
ಅಧಿಕಾರಿಗಳು ನಮ್ಮ ವೇಗಕ್ಕೆ ತಕ್ಕಂತೆ ಕೆಲಸ ಮಾಡಿ ಸರ್ಕಾರದಿಂದ ದೊರೆಯುವ ಎಲ್ಲಾ ಸವಲತ್ತು ಮತ್ತು ಅನುಕೂಲಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ತಲುಪಿಸುವ ಕೆಲಸ ಮಾಡಬೇಕು ಅದನ್ನು ಬಿಟ್ಟು ನಿರ್ಲಕ್ಷö್ಯ ವಹಿಸಿದರೆ ಅಂತಹವರ ವಿರುದ್ದ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಸಣ್ಣಪುಟ್ಟ ಸಮಸ್ಯೆಗಳನ್ನು ಹೇಳಿಕೊಳ್ಳಲು ಜನರು ಜನತಾ ದರ್ಶನ ಕಾರ್ಯಕ್ರಮಕ್ಕೆ ಆಗಮಿಸದೆ ನನಗೆ ದೂರವಾಣಿ ಕರೆ ಮಾಡಬೇಕು ಎಂದು ಮನವಿ ಮಾಡಿದ ಶಾಸಕರು ಮುಂದಿನ ದಿನಗಳಲ್ಲಿ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ೩೪ ಗ್ರಾಮ ಪಂಚಾಯಿತಿಗಳು ಮತ್ತು ಪುರಸಭೆ ವ್ಯಾಪ್ತಿಯ ೨೩ ವಾರ್ಡುಗಳಲ್ಲಿಯೂ ಅಧಿಕಾರಿಗಳೊಂದಿಗೆ ಜನತಾ ದರ್ಶನ ನಡೆಸುವುದಾಗಿ ಪ್ರಕಟಿಸಿದರು.
ಸಂಜೆ ೭ರ ತನಕ ಸತತವಾಗಿ ಸಾರ್ವಜನಿಕರು ಮತ್ತು ಪಕ್ಷದ ಕಾರ್ಯಕರ್ತರ ಅಹವಾಲು ಆಲಿಸಿದ ಶಾಸಕ ಡಿ.ರವಿಶಂಕರ್ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹರಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಶಾಸಕರ ಆಪ್ತ ಕಾರ್ಯದರ್ಶಿ ನವೀನ್, ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಪದಾಧಿಕಾರಿಗಳು ಹಾಜರಿದ್ದು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದರು.

RELATED ARTICLES
- Advertisment -
Google search engine

Most Popular