ಹನೂರು: ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ನೂತನ 4 ಬಸ್ ಗಳ ಸೇವೆಗೆ ಭಾನುವಾರ ಸಂಜೆ ಮಲೆಮಹದೇಶ್ವರ ಬೆಟ್ಟದಲ್ಲಿ ಚಾಲನೆ ನೀಡಲಾಯಿತು.
ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಚಾಲನೆ ನೀಡಿದರು.
ಹಲವು ವರ್ಷಗಳಿಂದಲೂ ಬೆಂಗಳೂರು, ಗುಂಡ್ಲುಪೇಟೆ, ನಂಜನಗೂಡು ಹಾಗೂ ಮೈಸೂರಿಗೆ ಪ್ರಾಧಿಕಾರದ ವತಿಯಿಂದ 8 ಬಸ್ ಗಳು ಸಂಚರಿಸುತ್ತಿದ್ದವು. ಆದರೆ 4 ಬಸ್ ಗಳು ಹದಗೆಟ್ಟಿದ್ದ ಪರಿಣಾಮ ನಂಜನಗೂಡು ಹಾಗೂ ಮೈಸೂರಿಗೆ ತೆರಳುತ್ತಿದ್ದ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಈ ಮಾರ್ಗದಲ್ಲಿ ಹೊಸ ಬಸ್ ಗಳನ್ನು ಬಿಡುವಂತೆ ಭಕ್ತರು ಒತ್ತಾಯಿಸುತ್ತಿದ್ದರು.
ಈ ದಿಸೆಯಲ್ಲಿ ಕಳೆದ ವರ್ಷ ಈ ಬಗ್ಗೆ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆದು ಖರೀದಿಸಲಾಗಿದ್ದ 4 ಹೊಸ ಬಸ್‌ಗಳಿಗೆ ಸಂಜೆ ದೇಗುಲದ ಮುಂಭಾಗ ಸಚಿವರು ಚಾಲನೆ ನೀಡಿದರು.
ಶಾಸಕರಾದ ಎಂ.ಆರ್ ಮಂಜುನಾಥ್, ಸಿ.ಪುಟ್ಟರಂಗಶೆಟ್ಟಿ, ಎಚ್. ಎಂ.ಗಣೇಶ್ ಪ್ರಸಾದ್, ಮಾಜಿ ಶಾಸಕ ಆರ್.ನರೇಂದ್ರ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಎಸ್ಪಿ ಪದ್ಮನಿ ಸಾಹೊ, ಪ್ರಾಧಿಕಾರದ ಕಾರ್ಯದರ್ಶಿ ಗೀತಾ ಹುಡೇದಾ, ಉಪ ಕಾರ್ಯದರ್ಶಿ ಚಂದ್ರಶೇಖರ್ ಇದ್ದರು.