ಮಂಡ್ಯ: ಹೆಚ್. ಮಲ್ಲಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಆಡಳಿತ ಮಂಡಳಿ ಅನೇಕ ಅವ್ಯವಹಾರದಲ್ಲಿ ತೊಡಗಿದ್ದು, ಸಂಘದಲ್ಲಿ ಕೊಟ್ಯಾಂತರ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆಂದು ಮಲ್ಲಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಮಾಜಿ ನಿರ್ದೇಶಕ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಬಿ.ಸಿ.ಪಾಂಡು ಆರೋಪಿಸಿದ್ದಾರೆ.
ಸಂಘದ ಆಡಳಿತ ಮಂಡಳಿ ನಿರ್ದೇಶಕರು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ಮತ್ತು ಉಪವಿಧಿಗಳಿಗೆ ವಿರುದ್ಧ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಿ.ಸಿ.ಪಾಂಡು ಅವರ ಮನವಿ ಮೇರೆಗೆ ವಿಚಾರಣೆ ನಡೆಸಿ ಸಂಘದ ನಿರ್ದೇಶಕರನ್ನು ಮಂಡ್ಯ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು 06-04-2023 ರಂದು ಅನರ್ಹಗೊಳಿಸಿರುತ್ತಾರೆ.
ಈ ಆದೇಶವನ್ನು ಪ್ರಶ್ನಿಸಿ ಆರು ಜನ ನಿರ್ದೇಶಕರು ನ್ಯಾಯಾಲಯಕ್ಕೆ ರಿಟ್ ಪಿಟಿಷನ್ ಸಲ್ಲಿಸಿದ್ದು, ಈ ಅರ್ಜಿ ಸಹಕಾರ ಸಂಘಗಳ ಉಪ ನಿಬಂಧಕರ ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಿ ಆದೇಶ ಮಾಡಲಾಗಿರುತ್ತದೆ.
ಮೂರು ಜನ ನಿರ್ದೇಶಕರು ನೇರವಾಗಿ ಸಹಕಾರ ಸಂಘಗಳ ಉಪ ನಿಬಂಧಕರ ನಾಯಲಯದಲ್ಲಿ ಬಿ.ಸಿ.ಪಾಂಡು ರನ್ನು ಎರಡನೇ ಎದುರು ಪಕ್ಷಗಾರರನ್ನಾಗಿ ಮಾಡಿ ಮೇಲ್ಮನವಿ ಸಲ್ಲಸಿರುತ್ತಾರೆ. ಈ ನಿರ್ದೇಶಕರು ನ್ಯಾಯಾಲಯಕ್ಕೆ ಇದೇ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯಲ್ಲಿ ನನ್ನನ್ನು ಪಕ್ಷಗಾರರಾಗಿ ಮಾಡಿರುವುದಿಲ್ಲ. ಆದರೆ ಸಹಕಾರ ಸಂಘಗಳ ಉಪ ನಿಬಂಧಕರು ಕಾನೂನು ಬಾಹಿರವಾಗಿ ಅನ್ಯರ ಪ್ರಭಾವದಿಂದ ಈ ಮೇಲ್ಮನವಿಯನ್ನು ದಾಖಸಿಕೊಂಡಿರುತ್ತಾರೆ.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವರಾದ ಚಲುವರಾಯಸ್ವಾಮಿ ಈ ಪ್ರಕರಣದಲ್ಲಿ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಒತ್ತಡ ನೀಡಿದ್ದಾರೆ ಹಾಗೂ ಹಣ ದುರುಪಯೋಗಕ್ಕೆ ಬಾಗಿಯಾಗಿರುವ ಹಾಗೂ ಅನರ್ಹಗೊಂಡಿರುವ ನಿರ್ದೇಶಕರ ಪರವಾಗಿ ಆದೇಶ ಮಾಡುವಂತೆ ಸಹಕಾರ ಸಂಘಗಳ ಉಪ ನಿಬಂಧಕರ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಲಾಗಿದೆ.
ಮಂಡ್ಯ ಜಿಲ್ಲಾ ಸಹಕಾರ ಬ್ಯಾಂಕ್ ನ ಅಧ್ಯಕ್ಷ ಜೋಗಿಗೌಡರವರು ಈ ಅನರ್ಹಗೊಂಡ ನಿರ್ದೇಶಕರ ಪರವಾಗಿ ಸಹಕಾರ ಸಂಘಗಳ ಹಿತದೃಷ್ಟಿಗೆ ಮಾರಕವಾಗಿ ಅನರ್ಹಗೊಂಡಿರುವ ನಿರ್ದೇಶಕರಿಗೆ ಸಹಾಯ ಮಾಡುವಂತೆ ಪ್ರಭಾವ ಬೀರಿರುತ್ತಾರೆ.
ಮಾತ್ರವಲ್ಲದೇ ಜೋಗಿಗೌಡರವರು ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಅವ್ಯವಹಾರದಲ್ಲಿ ಕಲಂ 54 ರ ವಿಚಾರಣೆಯಲ್ಲಿ ಆರೋಪಿಯಾಗಿದ್ದಾರೆ
ಸಹಕಾರ ಸಂಘಗಳ ಉಪನಿಬಂಧಕರು ಸಂಘದ ಹಿತದೃಷ್ಟಿಯನ್ನು ಗಮನಿಸದೆ ಈ ಮೇಲ್ಕಂಡ ಇಬ್ಬರು ಪ್ರಭಾವಿ ವ್ಯಕ್ತಿಗಳ ಪ್ರಭಾವದಿಂದ ಅನರ್ಹಗೊಂಡಿರುವ ನಿರ್ದೇಶಕರ ಪರವಾಗಿ ಆದೇಶ ಮಾಡುವ ಹುನ್ನಾರದಲ್ಲಿದ್ದಾರೆ.
ಇವರು ಸಂಘದ ಹಿತದೃಷ್ಟಿಗೆ ಭಂಗವನ್ನುಂಟು ಮಾಡಲು ಅನರ್ಹಗೊಂಡಿರುವ ನಿರ್ದೇಶಕರಿಗೆ ಸಹಾಯ ಮಾಡಿದರೆ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಮುಂದೆ ಸಂಘದ ಹಿತದೃಷ್ಟಿಯಿಂದ ವಿಷಸೇವನೆ ಮಾಡಲು ತೀರ್ಮಾನಿಸಿರುವುದಾಗಿ ಬಿ.ಸಿ.ಪಾಂಡು ಪ್ರಕಟಣೆಯಲ್ಲಿ ಆತ್ಮಹತ್ಯೆ ಬೆದರಿಕೆ ಹಾಕಿದ್ದಾರೆ.
ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಮತ್ತು ಮೇಲುಕೋಟೆಯ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಸಹ ಹೊಣೆಗಾರರಾಗಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.