Monday, April 21, 2025
Google search engine

Homeಅಪರಾಧವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ : ಇಬ್ಬರು ಅಮಾನತು

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ : ಇಬ್ಬರು ಅಮಾನತು

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅವ್ಯವಹಾರ ಆರೋಪಗಳ ಕಾರಣ ನಿಗಮದ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಜೆ.ಜಿ. ಪದ್ಮನಾಭ ಮತ್ತು ಲೆಕ್ಕಾಧಿಕಾರಿ ಪರುಶುರಾಮ್ ಜಿ. ದುರ್ಗಣ್ಣನವರ್ ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ.

ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಪ್ರಭಾರಿಯಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೆ.ಆರ್. ರಾಜ್‌ಕುಮಾರ್ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ಯೂನಿಯನ್ ಬ್ಯಾಂಕ್ ಖಾತೆಯಲ್ಲಿದ್ದ ನಿಗಮದ ೮೮.೬೨ ಕೋಟಿ ಅನುದಾನ ೧೪ ಅನಾಮಧೇಯ ಖಾತೆಗಳಿಗೆ ವರ್ಗಾವಣೆಯಾಗಲು ಪರೋಕ್ಷವಾಗಿ ಕಾರಣರಾಗುವ ಜೊತೆಗೆ, ಆ ಹಣ ಡ್ರಾ ಮಾಡಿಕೊಂಡಿದ್ದರೂ ಗಮನಿಸದೆ ಇರುವುದು, ಬ್ಯಾಂಕ್ ಸ್ಟೇಟ್‌ಮೆಂಟ್ ಸಲ್ಲಿಸದೇ ಇರುವುದು ವ್ಯವಸ್ಥಾಪಕ ನಿರ್ದೇಶಕ ಜೆ.ಜಿ. ಪದ್ಮನಾಭ ಅವರ ಕರ್ತವ್ಯಲೋಪವಾಗಿದೆ ಎಂದು ಅಮಾನತು ಆದೇಶದಲ್ಲಿ ವಿವರಿಸಲಾಗಿದೆ. ಅಲ್ಲದೆ, ಹಣ ವರ್ಗಾವಣೆ ಆಗಿರುವುದು ಮೇ ೨೨ರಂದೇ ಗಮನಕ್ಕೆ ಬಂದಿ ದ್ದರೂ, ಈ ವಿಷಯ ಮೇ ೨೭ರಂದು ಮಾಧ್ಯಮಗಳಲ್ಲಿ ಬಹಿರಂಗವಾದ ಬಳಿಕ ತಡವಾಗಿ ಪದ್ಮನಾಭ ಅವರು ವರದಿ ನೀಡುವ ಮೂಲಕ ಆರ್ಥಿಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ.

ಅನಾಮಧೇಯ ಖಾತೆಗಳ ವ್ಯಕ್ತಿಗಳ ಹೆಸರನ್ನು ವರದಿಯಲ್ಲಿ ಉಲ್ಲೇಖಿಸಿಲ್ಲ. ಅಕ್ರಮವಾಗಿ ಹಣ ಡ್ರಾ ಮಾಡಿಕೊಂಡಿರುವ ವ್ಯಕ್ತಿಗಳು ೫ ಕೋಟಿ ಯನ್ನು ನಿಗಮದ ಖಾತೆಗೆ ಹಿಂದಿರುಗಿಸಿದ್ದಾರೆಂದು ವರದಿಯಲ್ಲಿ ತಿಳಿಸಿದ್ದರೂ ಯಾವ ವ್ಯಕ್ತಿ, ಯಾವ ಖಾತೆಯಿಂದ ಹಿಂದಿರುಗಿಸಿದ್ದಾರೆಂಬ ಮಾಹಿತಿ ನೀಡಿಲ್ಲ. ಖಾತೆಗೆ ಸಂಬಂಧಿಸಿದ ವಿವರಗಳು, ಸ್ಟೇಟ್‌ಮೆಂಟ್‌ಗಳು, ಚೆಕ್ ಪುಸ್ತಕಗಳನ್ನು ತಮ್ಮ ಗಮನಕ್ಕೆ ಬಾರದಂತೆ ಲೆಕ್ಕವಿಭಾಗದ ಸಿಬ್ಬಂದಿ ತಡೆಹಿಡಿದಿದ್ದಾರೆಂದು ತಿಳಿಸಿ ದ್ದರೂ, ಆ ಸಿಬ್ಬಂದಿಗೆ ಯಾವುದೇ ನೋಟಿಸ್ ನೀಡಿಲ್ಲ. ಈ ಎಲ್ಲ ಕರ್ತವ್ಯಲೋಪ ಗಳ ಕಾರಣ ಮತ್ತು ಆರೋಪಗಳ ಸತ್ಯಾಸತ್ಯತೆ ತಿಳಿಯಲು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಪರುಶುರಾಮ್ ಜಿ. ದುರ್ಗಣ್ಣನವರ್ ಅವರನ್ನೂ ಇಲಾಖಾ ವಿಚಾರಣೆಗೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ ಎಂದೂ ಆದೇಶದಲ್ಲಿ ವಿವರಿಸಲಾಗಿದೆ. ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡ ನಿಗಮದ ಲೆಕ್ಕ ವಿಭಾಗದ ಅಧೀಕ್ಷಕ ಪಿ.ಚಂದ್ರಶೇಖರನ್ ಅವರಿಗೆ ನಿಗಮದ ಬ್ಯಾಂಕ್ ಖಾತೆಯ ದೃಢೀಕರಣದ ಚೆಕ್, ಆರ್‌ಟಿಜಿಎಸ್, ಬ್ಯಾಂಕ್ ದಾಖಲೆಗಳ ಸಮನ್ವಯದ ಹೊಣೆ ವಹಿಸಲಾಗಿತ್ತು. ದಾಖಲೆಗಳ ಪರಿಶೀಲನೆ ವೇಳೆ ನಿಗಮದ ಬ್ಯಾಂಕ್ ಖಾತೆಯಿಂದ ೯೪ ಕೋಟಿ ಹಣ ದುರ್ಬಳಕೆ ಆಗಿರುವುದು ಕಂಡುಬಂದಿತ್ತು ಎಂದು ಮೂಲಗಳು ಹೇಳಿವೆ.

RELATED ARTICLES
- Advertisment -
Google search engine

Most Popular