ಮಂಗಳೂರು(ದಕ್ಷಿಣ ಕನ್ನಡ): ಇಸ್ರೇಲ್ – ಪ್ಯಾಲೆಸ್ತೀನ್ ನಡುವೆ ಯುದ್ಧ ನಡೆಯುತ್ತಿದ್ದು, ಈ ಮಧ್ಯೆ ಹಮಾಸ್ ಪರ ಪ್ರಾರ್ಥನೆ ಮಾಡಬೇಕೆಂದು ವೀಡಿಯೋ ಮಾಡಿದ್ದ ವ್ಯಕ್ತಿಯನ್ನು ಮಂಗಳೂರಲ್ಲಿ ಬಂಧಿಸಲಾಗಿದೆ.
ಬಂಧಿತ ವ್ಯಕ್ತಿಯನ್ನು ಮಂಗಳೂರು ಬಂದರು ವಾಸಿ ಜಾಕಿರ್ ಯಾನ ಜಾಕಿ ಎಂದು ಗುರುತಿಸಲಾಗಿದೆ.
ಪ್ಯಾಲೆಸ್ತೀನ್ ಹಾಗೂ ಇಸ್ರೇಲ್ ಮಧ್ಯೆ ನಡೆಯುತ್ತಿರುವ ಯುದ್ಧಕ್ಕೆ ಸಂಬಂಧಿಸಿದಂತೆ ಹಮಾಸ್ ಸಂಘಟನೆಯ ಬಗ್ಗೆ ಎಲ್ಲರೂ ದುವಾ ಮಾಡಬೇಕೆಂದು ತನ್ನ ಮೊಬೈಲ್ ನಲ್ಲಿ ವೀಡಿಯೋ ಮಾಡಿ ವಾಟ್ಸಾಪ್ ನಲ್ಲಿ ಹರಿಯಬಿಟ್ಟು ವ್ಯಾಪಕವಾಗಿ ವೈರಲ್ ಮಾಡಿದ್ದು, ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ವೀಕ್ಷಿಸಿ ಹಮಾಸ್ ಉಗ್ರರ ಪರವಾಗಿ ವೀಡಿಯೋ ಮಾಡಿರುತ್ತಾನೆಂದು ತಮ್ಮ ಆತಂಕ ವ್ಯಕ್ತವಾಗಿತ್ತು. ಅಲ್ಲದೇ ಈ ಕುರಿತು ವಿಶ್ವ ಹಿಂದೂ ಪರಿಷತ್ ದೂರು ಕೂಡಾ ನೀಡಿತ್ತು.

ಇನ್ನು ಈ ವೀಡಿಯೋ ಸಮಾಜದಲ್ಲಿ ಕೋಮುಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಈ ಕೃತ್ಯಕ್ಕೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ವಿನಾಯಕ ತೋರಗಲ್ ಎಂಬುವವರು ಸ್ವಯಂ ದೂರು ತಯಾರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿತರಾದ ಮಂಗಳೂರು ಬಂದರು ವಾಸಿ ಜಾಕಿರ್ ಯಾನ ಜಾಕಿ ಎಂಬುವವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಈ ಆರೋಪಿತನ ಮೇಲೆ ಈ ಹಿಂದೆ ಕೂಡ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಸುಮಾರು 7 ಪ್ರಕರಣಗಳು ದಾಖಲಾಗಿದೆ.