ಮಂಗಳೂರು (ದಕ್ಷಿಣ ಕನ್ನಡ): ಆಗಸ್ಟ್ 31ರಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ 1984ರಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಗಾಳಿಗೆ ತೂರಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಪ್ರತಿಪಕ್ಷದ ಎಲ್ಲಾ ಸದಸ್ಯರಿಗೆ ಅಗೌರವ ತೋರಿ ಸರ್ವಾಧಿಕಾರಿ ಧೋರಣೆ ಅನುಸರಿಸಿದ್ದಾರೆ ಎಂದು ಮಂಗಳೂರು ಪಾಲಿಕೆಯ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಆರೋಪಿಸಿದ್ದಾರೆ. ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಮನಪಾದಲ್ಲಿ ತಿಂಗಳಿಗೊಮ್ಮೆ ನಡೆಯುವ ಸಾಮಾನ್ಯ ಸಭೆಯಲ್ಲಿ ಸ್ವಾಗತ, ಸ್ಥಿರೀಕರಣದ ಬಳಿಕ ವಿಪಕ್ಷ ನಾಯಕರಿಗೆ ಸಮಸ್ಯೆಗಳ ಬಗ್ಗೆ ಮಾತನಾಡಲು ಅವಕಾಶ ನೀಡುವುದು ಸಂಪ್ರದಾಯ. ಆದರೆ ಈ ಸಭೆಯಲ್ಲಿ ಅದಕ್ಕೆ ವಿರುದ್ಧವಾಗಿ ಮೇಯರ್ ತಮ್ಮ ಸಾಧನೆಗಳ ಪಟ್ಟಿಯನ್ನು ನೀಡಿದರು. ಆದರೆ ಅವರ ಸಾಧನೆ ಶೂನ್ಯವಾಗಿದ್ದು, ಗೊಂದಲ ಸೃಷ್ಟಿಸುವ ಉದ್ದೇಶದಿಂದ ಆಡಳಿತ ಪಕ್ಷದ ಸದಸ್ಯರಿಗೆ ಮಾತನಾಡಲು ಅವಕಾಶ ನೀಡಲು ಮುಂದಾದರು. ನಾವು ವಿಪಕ್ಷವಾಗಿ ಅಭಿವೃದ್ಧಿ ವಿಚಾರದಲ್ಲಿ ಎಂದೂ ರಾಜಕೀಯ ಮಾಡಿಲ್ಲ. ಆದರೆ ಈ ಹಿಂದಿನ ಸಭೆಯಲ್ಲಿಯೂ ಸ್ವಯಂ ಘೋಷಿತ ಆಸ್ತಿ ತೆರಿಗೆ ವಿಚಾರದಲ್ಲಿ ಮಾತನಾಡಲು ಮುಂದಾದಾಗ ಸಂಪ್ರದಾಯದಂತೆ ಬೆಲ್ ಕೂಡಾ ಬಾರಿಸದೆ ಸಭೆಯಿಂದ ಹೊರನಡೆದು ಸಭೆ ಮುಂದೂಡಿಕೆ ಎಂದು ಹೇಳಿಕೆ ಪ್ರಕಟಿಸಿದ್ದರು.
ಕಳೆದ ಸಭೆಯಲ್ಲೂ ಅವರ ಸಾಧನೆಯ ಬಗ್ಗೆ ನಾವು ವಿರೋಧ ಮಾಡುವ ಅರಿವಿತ್ತು. ಹಾಗಾಗಿ ಸಭೆಯನ್ನು ಮೊಟಕುಗೊಳಿಸಿದಾಗ ಅವರಿಗೆ ವಿಪಕ್ಷ ಸದಸ್ಯರನ್ನು ಕರೆದು ಮನವರಿಕೆ ಮಾಡಬಹುದಿತ್ತು. ಆದರೆ ಅವರಿಗೆ ಜನರ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಕೇವಲ ಪ್ರಚಾರಕ್ಕಾಗಿ ನಾವು ಸಾಮಾನ್ಯ ಸಭೆ ಮಾಡಲು ಬಿಟ್ಟಿಲ್ಲ ಎಂಬ ಆರೋಪ ಮಾಡಿದ್ದಾರೆ ಎಂದರು.