ಮಂಡ್ಯ: ಅಭಿವೃದ್ಧಿ ನೆಪದಲ್ಲಿ ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಧ್ವಾನವಾಗಿದ್ದು, ಇತ್ತ ಅಭಿವೃದ್ಧಿಯೂ ಇಲ್ಲ, ಅತ್ತ ಕ್ರೀಡಾ ಚಟುವಟಿಕೆಗಳೂ ಮಾಯವಾಗಿದ್ದು, ಕ್ರೀಡಾಸಕ್ತರು, ವಾಕರ್ ಗಳಿಗೆ ನಿತ್ಯವೂ ಕಿರಿಕಿರಿ ಉಂಟಾಗಿದೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದು, ಕ್ರೀಡಾಂಗಣ ಪ್ರೇಮಿಗಳು, ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ಹಿಂದಿನ ಸರ್ಕಾರ 10 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿತ್ತು. ಅಂದಿನ ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡ್ರು ಚಾಲನೆ ನೀಡಿದ್ದರು.

ಮೂರು ವರ್ಷಗಳು ಕಳೆದರೂ ಕ್ರೀಡಾಂಗಣ ಅಭಿವೃದ್ಧಿಯಾಗಿಲ್ಲ. ಕ್ರೀಡಾಂಗಣದಲ್ಲಿ ಅಗತ್ಯ ಸೌಕರ್ಯಗಳಿಲ್ಲದೆ ಕ್ರೀಡಾಪಟುಗಳು ಪರದಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ಕ್ರೀಡೆಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಸಮರ್ಪಕ ಸೌಲಭ್ಯವಿಲ್ಲದ ಕಾರಣ ಕ್ರೀಡಾಪಟುಗಳು ಹಿಂದೆ ಸರಿಯುತ್ತಿದ್ದಾರೆ.
ಕ್ರೀಡಾಭ್ಯಾಸದ ವೇಳೆ ಬಾಯಾರಿಕೆಯಾದರೆ ಕುಡಿಯಲು ನೀರಿನ ಸೌಲಭ್ಯವೂ ಇಲ್ಲ. ಶೌಚಾಲಯವು ಉಪಯೋಗಕ್ಕೆ ಬರುತ್ತಿಲ್ಲ. ಸದಾ ಬಾಗಿಲು ಹಾಕಲಾಗಿರುತ್ತದೆ. ಹೊಸ ಶೌಚಾಲಯ ನಿರ್ಮಾಣವಾಗಿದ್ರು ಇನ್ನೂ ಉದ್ಘಾಟನೆಯಾಗಿಲ್ಲ. ಕ್ರೀಡಾಪಟುಗಳು ಮಲ,ಮೂತ್ರ ವಿಸರ್ಜನೆಗೆ ಬಯಲನ್ನೇ ಆಶ್ರಯಿಸಿದ್ದಾರೆ.
ಕ್ರೀಡಾಂಗಣದ ಸುತ್ತ ಮುತ್ತ ಗಿಡಗಂಟೆಗಳು ಬೆಳೆದು ನಿಂತು ಅನೈರ್ಮಲ್ಯ ತಾಂಡವವಾಡುತ್ತಿದ್ದು,.ಇದರಿಂದ ನಿತ್ಯ ಕ್ರೀಡಾಂಗಣದಲ್ಲಿ ವಾಕ್ ಮಾಡುವ ಸಾರ್ವಜನಿಕರಿಗೂ ಕಿರಿಕಿರಿ ಉಂಟಾಗಿದೆ.
ಮೂರು ವರ್ಷಗಳಿಂದ ಅಭಿವೃದ್ಧಿ ಕೆಲಸ ಅಂತ ಸಬೂಬು ಹೇಳುತ್ತಿರುವ ಅಧಿಕಾರಿಗಳು, ಕ್ರೀಡಾಂಗಣಕ್ಕೆ ಬೀಗ ಹಾಕಿದ್ದಾರೆ.
ಜಿಲ್ಲಾಡಳಿತ ಹಾಗೂ ಕ್ರೀಡಾ ಇಲಾಖೆ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು, ಕೂಡಲೇ ಸಂಬಂಧಿಸಿದ ಇಲಾಖೆ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.