ಜೆಡಿಎಸ್ ನಿಂದ ಎಚ್.ಡಿ ಕುಮಾರಸ್ವಾಮಿ ಫಿಕ್ಸ್ …? ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಿಗೂಢ
ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಮೈತ್ರಿಯ ಮೂಲಕ ಸ್ಪರ್ಧೆಗೆ ಇಳಿಯುವುದು ಖಚಿತವಾಗುತ್ತಿದ್ದು, ಈ ಮೂಲಕ ಕಳೆದ ಬಾರಿಯಂತೆ ಈ ಬಾರಿಯು ಸಹ ಈ ಕ್ಷೇತ್ರ ಮತ್ತೊಮ್ಮೆ ಹೈವೊಲ್ಟೈಜ್ ಕದನಕ್ಕೆ ವೇದಿಕೆ ಸಿದ್ದವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದರೆ ಮುಂದೆ ಇಲ್ಲಿಂದ ತಮ್ಮ ಗೆಲುವಿಗಾಗಿ ಮಾಡಬೇಕಾದ ರಾಜಕೀಯ ರಣ ತಂತ್ರಗಳನ್ನು ಎಚ್.ಡಿ.ಕುಮಾರಸ್ವಾಮಿ ಈ ಕ್ಷೇತ್ರದ ವ್ಯಾಪ್ತಿಗೆ ಬರುವ ವಿಧಾನ ಸಭಾ ಕ್ಷೇತ್ರಗಳಲ್ಲಿ ತಮಗೆ ಇರುವ ಅನುಕೂಲಗಳನ್ನು ಸದ್ದಿಲ್ಲದೇ ಸರ್ವೆ ಮಾಡಿಸುತ್ತಿದ್ದಾರೆ.
ಕಳೆದ ಬಾರಿ 2019 ರಲ್ಲಿ ತಮ್ಮ ಪುತ್ರ ನಿಖಿಲ್ ಅವರು ಸ್ಪರ್ಧೆ ಮಾಡಿದಾಗ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಇದ್ದರೂ ಕೂಡ ಕಾಂಗ್ರೆಸ್ ಕೈ ಕೊಟ್ಟ ಪರಿಣಾಮವಾಗಿ ಸೋಲನ್ನು ಕಾಣಬೇಕಾಯಿತು. ಇದನ್ನು ಮನಗೊಂಡು ಕುಮಾರಸ್ವಾಮಿ ಅವರು ಈ ಕ್ಷೇತ್ರದ ವ್ಯಾಪ್ತಿಗೆ ಬರುವ 8 ಕ್ಷೇತ್ರಗಳ ಜೆಡಿಎಸ್ ಮುಖಂಡರೊಂದಿಗೆ ನಿರಂತರವಾಗಿ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮಂಡ್ಯ ಲೋಕ ಸಭಾ ಕ್ಷೇತ್ರದಿಂದ ಯಾರಿಗೆ ಟಿಕೇಟ್ ಕೊಟ್ಟರೂ ಜೆಡಿಎಸ್ ನಲ್ಲಿ ಮುಖಂಡರು ಕಾಲು ಎಳೆಯುವ ಅನುಮಾನ ಇರುವುದರಿಂದ ಇದನ್ನು ತಪ್ಪಿಸಲು ಸ್ವತಹ ಕುಮಾರಸ್ವಾಮಿ ಅವರೇ ಇಲ್ಲಿಂದ ಅಖಾಡಕ್ಕೆ ಇಳಿಯಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಾರಿ ವಿಧಾನ ಸಭಾ ಕ್ಷೇತ್ರದ ಚುನಾವಣೆಗಳಲ್ಲಿ 8 ಕ್ಷೇತ್ರಗಳಲ್ಲಿ ಕೇವಲ ಒಂದು ಸ್ಥಾನ ಗೆದ್ದು ಮಕಾಡೆ ಮಲಗಿರುವ ಜೆಡಿಎಸ್ ಪಕ್ಷ ಇಲ್ಲಿ ಮತ್ತೆ ಫೀನಿಕ್ಸ್ ನಂತೆ ಮೇಲೆ ಏಳಬೇಕಾದರೆ ಮತ್ತು ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿ ಯಿಂದ ಈ ಕ್ಷೇತ್ರ ಗೆಲ್ಲಬೇಕಾದ ಅನಿವಾರ್ಯತೆ ಇರುವುದರಿಂದ ಕುಮಾರಸ್ವಾಮಿ ಅವರ ಸ್ಪರ್ಧೆಗೆ ಮುಖಂಡರು ಮಣೆ ಹಾಕಲು ಮುಂದಾಗಿರುವ ಪರಿಣಾಮ ಕುಮಾರ ಸ್ವಾಮಿ ಇಲ್ಲಿಂದ ಸ್ಪರ್ಧೆಗೆ ಉತ್ಸುಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಲೇ ಈ ಕ್ಷೇತ್ರದ ಮುಖಂಡರೊಂದಿಗೆ ಚರ್ಚಿಸಿರುವ ಕುಮಾರಸ್ವಾಮಿ ಅವರನ್ನು ಮದ್ದೂರಿನ ಡಿ.ಸಿ.ತಮ್ಮಣ್ಣ, ಮಳವಳ್ಳಿಯ ಅನ್ನದಾನಿ, ಕೆ.ಆರ್.ಪೇಟೆಯ ಶಾಸಕ ಮಂಜುನಾಥ್ ಆದಿಯಾಗಿ ನೀವು ನಿಂತರೇ ಮಾತ್ರ ಎಲ್ಲರೂ ಒಗ್ಗಟ್ಟಿನಿಂದ ದುಡಿಯುವ ಬಗ್ಗೆ ಒಮ್ಮತ ವ್ಯಕ್ತಪಡಿಸಿರುವುದರಿಂದ ಕುಮಾರಸ್ವಾಮಿ ಅವರಿಗೆ ಒಂದು ರೀತಿಯಲ್ಲಿ ಆನೆ ಬಲ ಬಂದಿದ್ದು ಇನ್ನು ಕೆಲವೇ ದಿನಗಳಲ್ಲಿ ಮಂಡ್ಯ ಕ್ಷೇತ್ರದ ರಾಜಕೀಯ ಅಖಾಡಕ್ಕೆ ಇಳಿಯುತ್ತಾರೆ ಎಂದು ಜೆಡಿಎಸ್ ಪಕ್ಷದ ಮೂಲಗಳು ತಿಳಿಸಿವೆ.
“ಎಚ್.ಡಿ.ಕೆ.ಬರದೇ ಹೋದರೇ ನಿಖಿಲ್-ಪುಟ್ಟರಾಜು ಇಲ್ಲವೇ ಸುರೇಶ್ ಗೌಡ “
ಒಂದು ವೇಳೆ ಈ ಕ್ಷೇತ್ರದಿಂದ ಕುಮಾರಸ್ವಾಮಿ ಅವರು ಕಣಕ್ಕೆ ಇಳಿಯದೇ ಹೋದರೇ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಇಲ್ಲವೇ ನಾಗಮಂಗಲದ ಮಾಜಿ ಶಾಸಕ ಸುರೇಶ್ ಗೌಡ ಅವರಲ್ಲಿ ಯಾರಿಗಾದರು ಒಬ್ಬರಿಗೆ ಇಲ್ಲಿಂದ ಸ್ಪರ್ಧಿಸಲು ಅವಕಾಶ ಸಿಗಲಿದ್ದು ಒತ್ತಾಯಕ್ಕೆ ಮಣಿದರೇ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆಗೆ ಇಳಿಯ ಬಹುದು ಎಂಬುದು ಜೆಡಿಎಸ್ ಮೂಲಗಳು ತಿಳಿಸಿವೆ.
“ಕುಮಾರಸ್ವಾಮಿ ಕಟ್ಟಿ ಹಾಕಲು ಕೈ ಶಾಸಕರ ತಂತ್ರ”
ಒಂದು ವೇಳೆ ಕುಮಾರಸ್ವಾಮಿ ಅವರು ಈ ಕ್ಷೇತದಿಂದ ಸ್ಪರ್ಧಿಸಿದರೇ ಅವರನ್ನು ಕಟ್ಟಿ ಹಾಕಲು ಮಂಡ್ಯ ಲೋಕ ಸಭಾ ಕ್ಷೇತ್ರದ ವ್ಯಾಪ್ತಿಯ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಸದ್ದಿಲ್ಲದೇ ತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಕುಮಾರಸ್ವಾಮಿ ಅವರ ಜೊತೆಗೆ ಇದ್ದು ಇದೀಗ ಹಾವು -ಮುಂಗುಸಿಯಂತೆ ಇರುವ ನಾಗಮಂಗಲದ ಶಾಸಕರಾಗಿರುವ ಕೃಷಿ ಸಚಿವ ಚೆಲುವರಾಯ ಸ್ವಾಮಿ, ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರಲ್ಲದೇ ಮದ್ದೂರು ಶಾಸಕ ಕದಲೂರು ಉದಯ್, ಮಂಡ್ಯ ಶಾಸಕ ರವಿಕುಮಾರ ಗಣಿಗ, ಮಳವಳ್ಳಿ ಶಾಸಕ ನರೇಂದ್ರಸ್ವಾಮಿ,ಕೆ.ಆರ್.ನಗರ ಶಾಸಕ ಡಿ.ರವಿಶಂಕರ್ ಅವರು ತಮ್ಮ ಗೆಲುವಿನಂತೆ ಈ ಕ್ಷೇತ್ರದ ಕೈ ಅಭ್ಯರ್ಥಿ ಗೆಲುವಿಗೆ ಬೇಕಾದ ರೂಪು-ರೇಷೆಯ ಕಾರ್ಯಕ್ಕೆ ಸಿದ್ದತೆ ನಡೆಸಿದ್ದಾರೆ.
ಯಾಕೆಂದರೆ ಕುಮಾರಸ್ವಾಮಿ ಅವರು ಇಲ್ಲಿಂದ ಗೆದ್ದು ಒಂದು ವೇಳೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರಕ್ಕೆ ಮತ್ತೆ ಅಧಿಕಾರಕ್ಕೆ ಬಂದರೆ ಮಂತ್ರಿ ಆಗುತ್ತಾರೆ ಎಂದು ಹೇಳುತ್ತಿರುವುದರಿಂದ ಮತ್ತು ಇದು ಆಗದೇ ಹೋದರು ಸಹ ಸಂಸದರನ್ನು ಪ್ರೋಟೋಕಾಲ್ ಪ್ರಕಾರ ಸರ್ಕಾರಿ ಕಾರ್ಯಕ್ರಮಗಳಿಗೆ ಆಹ್ವಾನಿಸ ಬೇಕು. ಇವರ ಜೊತೆ ವೇದಿಕೆ ಹಂಚಿ ಕೊಳ್ಳುವುದು ಕಷ್ಟ ಜೊತೆಗೆ ತಮ್ಮಪ್ರಭಾವ ಬೀರಿ ಅಧಿಕಾರಿಗಳು ಮತ್ತು ಕ್ಷೇತ್ರದಲ್ಲಿ ಹಿಡಿತ ಸಾಧಿಸುತ್ತಾರೆ ಎಂಬ ಗುಮ್ಮ ಕಾಡುತ್ತಿರುವ ಪರಿಣಾಮವಾಗಿಯೇ ಕುಮಾರಸ್ವಾಮಿ ಅವರನ್ನು ಕಟ್ಟಿ ಹಾಕಲೇ ಬೇಕಾದ ಅನಿವಾರ್ಯತೆಗೆ ಕೈ ಶಾಸಕರು ಸಿಲುಕಿದ್ದಾರೆ.
ಕೈ ಪಕ್ಷದಿಂದ ಅಭ್ಯರ್ಥಿ ನಿಗೂಢ..?
ಒಂದು ವೇಳೆ ಕುಮಾರಸ್ವಾಮಿ ಅವರು ಈ ಕ್ಷೇತ್ರದಿಂದ ಕಣಕ್ಕೆ ಇಳಿದರೇ ಕೈ ಪಕ್ಷದಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸ ಬೇಕಾದ ಅನಿವಾರ್ಯತೆ ಇದ್ದು ಇದಕ್ಕಾಗಿ ಕೆಲವರು ಮಾಜಿ ಸಂಸದೆ ರಮ್ಯ ಅವರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಕೆಲವರು ಕೃಷಿ ಸಚಿವ ಚೆಲುವರಾಯ ಸ್ವಾಮಿ ಇಲ್ಲವೇ ಅವರ ಪತ್ನಿಯನ್ನೆ ಕಣಕ್ಕೆ ಇಳಿಸಿದರೇ ಅನುಕೂಲ ಎಂದು ಕೈ ಹೈಕಮಾಂಡ್ ಗೆ ಅಭಿಪ್ರಾಯ ತಿಳಿಸಿದ್ದು, ಇವರ ಜೊತೆಗೆ ಮಾಜಿ ಸಚಿವ ಆತ್ಮಾನಂದ , ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಡಾ.ರವೀಂದ್ರ ಹೆಸರು ಕೇಳಿ ಬರುತ್ತಿದ್ದು, ಇವರ ನಡುವೆ ನಾಗಮಂಗಲದ ಮೂಲದ ಉದ್ಯಮಿ ಚಂದ್ರು ಹೆಸರು ಅಚ್ಚರಿಯಾಗಿ ಕೇಳಿ ಬರುತ್ತಿದೆ.
ಇನ್ನು ಕೆಲ ಕಾಂಗ್ರೆಸ್ ನಾಯಕರು ಸಂಸದೆ ಸುಮಲತಾ ಅಂಬರೀಷ್ ಅವರನ್ನು ಕಾಂಗ್ರೆಸ್ ಗೆ ಕರೆತಂದು ಟಿಕೇಟ್ ನೀಡಿದರೆ ಅಂಬಿ ಬೆಂಬಲಿಗರು ಮತ್ತು ಕೈ ಕಾರ್ಯಕರ್ತರ ಹೋರಾಟದಿಂದ ಗೆಲುವು ಪಡೆಯ ಬಹುದು ಎಂಬ ಲೆಕ್ಕಾಚಾರ ನಡೆದಿವೆ ಎಂದು ಹೇಳಲಾಗುತ್ತಿದೆ.
ಸುಮಲತಾ ಬೆಂಬಲಿಗರಿಗೆ ಎಚ್.ಡಿ.ಕೆ.ಗಾಳ..?
ಮಂಡ್ಯದಲ್ಲಿ ಸ್ಪರ್ಧೆಗೆ ಮುಂದಾಗಿರುವ ಕುಮಾರಸ್ವಾಮಿ ಎಲ್ಲವನ್ನು ತಯಾರಿ ಮಾಡಿಯೇ ಅಖಾಡಕ್ಕೆ ಧುಮುಕಲು ಸಿದ್ದವಾಗುತ್ತಿದ್ದು, ಮೊದಲ ಹಂತವಾಗಿಯೇ ಸುಮಲತಾ ಬೆಂಬಲಿಗರಿಗೆ ಗಾಳ ಹಾಕುತ್ತಿದ್ದಾರೆ . ಮೊದಲ ಪ್ರಯತ್ನದಲ್ಲಿ ಶ್ರೀರಂಗಪಟ್ಟಣದ ಬಿಜೆಪಿ ಮುಖಂಡ ಸಚ್ಚಿದಾನಂದ, ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಿ ಉಮೇಶ್ ಅವರನ್ನು ಸಂಪರ್ಕಿಸಿ ಮಾತು ಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ನಾರಾಯಣಗೌಡ- ಶಿವರಾಮೇಗೌಡರ ನಡೆ ಎತ್ತ…?
ಮುಂದೆ ಈ ಕ್ಷೇತ್ರದಿಂದ ಬಿಜೆಪಿ – ಜೆಡಿಎಸ್ ಮೈತ್ರಿಯ ಮೂಲಕ ಕುಮಾರಸ್ವಾಮಿ ಅವರು ಸ್ಪರ್ಧೆಗೆ ಇಳಿದರೇ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವನ್ನು ಪತನವಾಗಲು ಕಾರಣರಾಗಿದ್ದ ಕೆ.ಆರ್.ಪೇಟೆಯ ನಾರಾಯಣಗೌಡರು ಮತ್ತು ಮಾಜಿ ಸಂಸದ ಶಿವರಾಮೇಗೌಡರು ಈ ಮೈತ್ರಿ ಕೂಟಕ್ಕೆ ಬೆಂಬಲ ನೀಡುತ್ತಾರೋ ಇಲ್ಲವೊ ಎಂಬುದು ಮಾತ್ರ ನಿಗೂಢವಾಗಿದೆ.
“ಸಾ.ರಾ.ಅವರನ್ನು ಪರಿಗಣಿಸಿ “
ಇತ್ತೀಚಿಗೆ ಬೆಂಗಳೂರಿನ ಜೆ.ಪಿ.ಭವನದಲ್ಲಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡದೇ ಹೋದರೇ ಮಾಜಿ ಸಚಿವ ಸಾ.ರಾ.ಮಹೇಶ್ ಅವರಿಗೆ ಇಲ್ಲಿಂದ ಸ್ಪರ್ಧಿಸಲು ಅವಕಾಶ ಕೊಡಿ ಎಂದು ಸಭೆಯಲ್ಲಿ ಭಾಗವಹಿಸಿದ್ದ ಕೆ.ಆರ್.ನಗರ ಜೆಡಿಎಸ್ ಮಾಜಿ ಅಧ್ಯಕ್ಷ ಚಂದ್ರಶೇಖರ್, ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಎಪಿಎಂಸಿ ಮಾಜಿ ನಿರ್ದೇಶಕ ಬಂಡಹಳ್ಳಿ ಕುಚೇಲ, ಹಳಿಯೂರು ಗ್ರಾ.ಪಂ.ಉಪಾಧ್ಯಕ್ಷ ಎಚ್.ಆರ್.ಕೋಳಿಕಿಟ್ಟಿ ಮುಖಂಡರಾದ ಹರದನಹಳ್ಳಿ ರಮೇಶ್, ಹೊಸೂರು ಬಿ.ರಮೇಶ್, ಹನಸೋಗೆ ನಾಗರಾಜ, ಹನಸೋಗೆ ಗ್ರಾ.ಪಂ ಮಾಜಿ ಅಧ್ಯಕ್ಷ ರಾಜೇಶ್, ಚಿಕ್ಕಹನಸೋಗೆ ಅಭಿ, ಚಿಕ್ಕವಡ್ಡರಗುಡಿ ಶಂಭು, ಡಿ.ವಿ.ಗುಡಿ ಯೋಗೇಶ್,ಕಾಶಿ, ಅಂಕನಹಳ್ಳಿ ರಂಗಪ್ಪ, ಮೊದಲಾದವರು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.