ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ದಾರುಣ ಘಟನೆಯು ಬೆಳಕಿಗೆ ಬಂದಿದೆ. ಕೇವಲ 10 ದಿನಗಳ ಪ್ರೇಮ ಸಂಬಂಧದ ಬಳಿಕ ಯುವಕನೊಬ್ಬ ತನ್ನ ಇನ್ಸ್ಟಾಗ್ರಾಮ್ ಪರಿಚಿತವಾದ ವಿವಾಹಿತ ಪ್ರಿಯತಮೆಯನ್ನು ಹತ್ಯೆಗೈದು ಶವವನ್ನು ತನ್ನದೇ ಜಮೀನಿನಲ್ಲಿ ಮುಚ್ಚಿಟ್ಟ ಘಟನೆ ನಡೆದಿದೆ.
ಘಟನೆ ಮಂಡ್ಯದ ಕರೋಟಿ ಗ್ರಾಮದಲ್ಲಿ ನಡೆದಿದೆ. ಹತ್ಯೆಗೀಡಾದ ಮಹಿಳೆಯನ್ನು ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ (35) ಎಂದು ಗುರುತಿಸಲಾಗಿದೆ. ಪ್ರೀತಿಯ ಮೃತದೇಹವನ್ನು ಪೊಲೀಸರು ಪುನೀತ್ ಎಂಬ ಯುವಕನ ಜಮೀನಿನಲ್ಲಿ ಪತ್ತೆ ಹಚ್ಚಿದ್ದಾರೆ. ಈ ಯುವಕನೇ ಈ ಕೃತ್ಯದ ಆರೋಪಿ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಇನ್ಸ್ಟಾಗ್ರಾಮ್‍ನಲ್ಲಿ ಯುವಕನಿಗೆ ಪ್ರೀತಿ ಪರಿಚಯವಾಗಿದ್ದಳು. ಇಬ್ಬರ ನಡುವೆ ಹತ್ತೇ ದಿನದಲ್ಲಿ ಪ್ರೀತಿ, ಪ್ರೇಮ ಹಾಗೂ ಪ್ರಣಯ ಎಂದೆಲ್ಲ ನಡೆದು, ಮಹಿಳೆಯ ಕೊಲೆಯಲ್ಲಿ ಅಂತ್ಯವಾಗಿದೆ. ಗಂಡ, ಮಕ್ಕಳಿದ್ದರೂ ಪುನೀತ್ ಜೊತೆ ಪ್ರೀತಿ ಲವ್‍ನಲ್ಲಿ ಬಿದ್ದಿದ್ದಳು. ಕಳೆದ ಭಾನುವಾರ ಮೈಸೂರಿಗೆ ಒಟ್ಟಿಗೆ ಕಾರಿನಲ್ಲಿ ತೆರಳಿದ್ದರು. ಇಬ್ಬರು ಮೈಸೂರು, ಮಂಡ್ಯ ಪ್ರವಾಸಿ ಸ್ಥಳಗಳಲ್ಲಿ ಸುತ್ತಾಡಿದ್ದರು. ನಂತರ ಕೆ.ಆರ್.ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ. ಅಲ್ಲೇ ಮಹಿಳೆಯನ್ನು ಕೊಲೆಗೈದು ಚಿನ್ನಾಭರಣ ದೋಚಿದ್ದಾನೆ. ಬಳಿಕ ತನ್ನ ಜಮೀನಿನಲ್ಲಿ ಶವ ಮುಚ್ಚಿಟ್ಟು ಪರಾರಿಯಾಗಿದ್ದ.
ಪ್ರೀತಿಯ ಮೊಬೈಲ್‍ಗೆ ಬಂದಿದ್ದ ಕರೆಗಳಿಂದ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.