Friday, April 18, 2025
Google search engine

Homeರಾಜ್ಯಸುದ್ದಿಜಾಲಮಂಡ್ಯ: ಮೈಕ್ರೋ ಫೈನಾನ್ಸ್ ಗಳ ಕಿರುಕುಳ ಆರೋಪ: ನೇಣಿನ ಕುಣಿಕೆಯೊಂದಿಗೆ ಮಹಿಳೆಯರ ವಿನೂತನ ಪ್ರತಿಭಟನೆ

ಮಂಡ್ಯ: ಮೈಕ್ರೋ ಫೈನಾನ್ಸ್ ಗಳ ಕಿರುಕುಳ ಆರೋಪ: ನೇಣಿನ ಕುಣಿಕೆಯೊಂದಿಗೆ ಮಹಿಳೆಯರ ವಿನೂತನ ಪ್ರತಿಭಟನೆ

ಮಂಡ್ಯ: ಸಾಲ ವಸೂಲಿಗಾಗಿ ನಿತ್ಯ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯರು ತಾಲ್ಲೂಕಿನ ಹೊಳಲು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು. ಹಗ್ಗ ಮತ್ತು ಸೀರೆಗಳನ್ನು ಪಂಚಾಯಿತಿ ಎದುರಿನ ಶೆಲ್ಟರ್‌ನಲ್ಲಿ ನೇತು ಹಾಕಿ, ‘ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ’ ಎಂದು ಒತ್ತಾಯಿಸಿದರು.

ಅನಕ್ಷರಸ್ಥ ಮಹಿಳೆಯರಿಗೆ ಸಾಲ ಕೊಟ್ಟು ಕಿರುಕುಳ ಕೊಡುತ್ತಿರುವ ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

ಯಾವ ಅಧಿಕಾರಿಗೆ ಮನವಿ ಕೊಡಬೇಕೆಂದು ಗೊತ್ತಿಲ್ಲದೆ, ಪಂಚಾಯಿತಿಗೆ ಬಂದಿದ್ದೇವೆ ಎಂದು ಅಳಲು ತೋಡಿಕೊಂಡರು.

‘ಮೈಕ್ರೋ ಫೈನಾನ್ಸ್‌ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಖಾಸಗಿ ಬ್ಯಾಂಕ್‌ನವರು ಕೂಲಿ ಮಾಡುತ್ತಿರುವ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಸುಮಾರು 50 ರಿಂದ 1 ಲಕ್ಷದ ವರೆಗೆ ಸಾಲ ನೀಡಿದ್ದು, ಮರುಪಾವತಿಸುವಂತೆ ಒತ್ತಡ ಹೇರುತ್ತಿದ್ದಾರೆ. ಸಾಲ ಪಡೆದಿರುವುದು ನಿಜ. ಆದರೆ ಮರುಪಾವತಿ ಮಾಡಲು ಕಾಲವಕಾಶ ನೀಡಬೇಕು’ ಎಂದು ಕನ್ನಡಸೇನೆ ಸಂಘಟನೆಯ ಜಿಲ್ಲಾ ಸಂಚಾಲಕ ವೇಣುಗೋಪಾಲ್‌ ಒತ್ತಾಯಿಸಿದರು.

ಕಂತಿನ ಪ್ರಕಾರ ಸಾಲ ಮರುಪಾವತಿ ಮಾಡಲು ತಪ್ಪಿದರೆ, ಒಂದು ವಾರ, 15 ದಿವಸ ಅಥವಾ ಒಂದು ತಿಂಗಳ ಬಡ್ಡಿಗೆ ಬಡ್ಡಿ ಸೇರಿಸಿ ವಸೂಲು ಮಾಡಲು ನಿಲ್ಲುತ್ತಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಭಯ ಹುಟ್ಟಿಸುತ್ತಾರೆ, ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು ಎಂದು ಕೋರಿದರು.

ಸ್ಥಳಕ್ಕೆ ಬಂದ ಪಂಚಾಯಿತಿ ಉಪಾಧ್ಯಕ್ಷ ನಾರಾಯಣಪ್ಪ, ಸದಸ್ಯರಾದ ರಾಜಶೇಖರ್‌, ಎಚ್‌.ಡಿ.ಪಲ್ಲವಿ ಹಾಗೂ ಪಿಡಿಒ ಸಂತೋಷ್‌, ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಮಹಿಳೆಯರು ಪ್ರತಿಭಟನೆ ಸ್ಥಗಿತಗೊಳಿಸಿದರು.

RELATED ARTICLES
- Advertisment -
Google search engine

Most Popular