Friday, April 4, 2025
Google search engine

Homeಅಪರಾಧಮಂಡ್ಯ: ಸರ್ಕಾರಿ ನೌಕರಿ ಹೆಸರಲ್ಲಿ 30ಕ್ಕೂ ಹೆಚ್ಚು ಮಂದಿಗೆ ವಂಚನೆ

ಮಂಡ್ಯ: ಸರ್ಕಾರಿ ನೌಕರಿ ಹೆಸರಲ್ಲಿ 30ಕ್ಕೂ ಹೆಚ್ಚು ಮಂದಿಗೆ ವಂಚನೆ

ಮಂಡ್ಯ: ಸರ್ಕಾರಿ ಕೆಲಸ ಪಡೆಯಬೇಕು ಎಂದರೆ ಅರ್ಹತೆ ಜೊತೆಗೆ ಪರೀಕ್ಷೆಯಲ್ಲಿ ಪಾಸ್ ಆಗಬೇಕು. ಆದರೆ ಇಲ್ಲೊಬ್ಬ ನೀವು ಲಕ್ಷ ಲಕ್ಷ ಹಣ ಕೊಡಿ ಸಾಕು, ನಿಮ್ಮ ಮಕ್ಕಳಿಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ಕೋಟಿ ಕೋಟಿ ರೂ. ವಂಚನೆ ಮಾಡಿರೋದು ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.

ಮಂಡ್ಯ ನಗರದ ತಾವರೆಗೆರೆ ನಿವಾಸಿ ಹೆಚ್.ಸಿ.ವೆಂಕಟೇಶ್ ವಂಚಿಸಿದ ವ್ಯಕ್ತಿ. ತಾನೊಬ್ಬ ದೊಡ್ಡ ಅಧಿಕಾರಿ ಎಂದು ಬಿಂಬಿಸಿಕೊಂಡು ನಿಮ್ಮ ಮಕ್ಕಳಿಗೆ, ನಿಮ್ಮ ಹೆಂಡತಿಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ಲಕ್ಷ ಲಕ್ಷ ಪೀಕಿ ವಂಚಿಸೋದು ಈತನ ಕೆಲಸ. ವಿಧಾನಸೌಧದಲ್ಲಿ ಅಧಿಕಾರಿಯಾಗಿದ್ದೇನೆ ಎಂದು ಬಿಲ್ಡಪ್ ಕೊಟ್ಟು ಈ ಭೂಪ ಮಂಡ್ಯದ ಹಲವರಿಗೆ ವಂಚಿಸಿದ್ದಾನೆ.

ವೆಂಕಟೇಶ್ ತಾವರಗೆರೆಯ ಗಾಯತ್ರಿ ಎಂಬವರಿಗೆ ನಿಮ್ಮ ಮೂವರು ಮಕ್ಕಳಿಗೆ ಅಬಕಾರಿ ಇಲಾಖೆಯಲ್ಲಿ ಡ್ರೈವರ್ ಕೆಲಸ ಕೊಡಿಸುತ್ತೇನೆ. ತಲಾ ಒಬ್ಬರಿಗೆ 6 ಲಕ್ಷದಂತೆ 18 ಲಕ್ಷ ಕೊಡಿ ಎಂದಿದ್ದ. ಇದನ್ನು ನಂಬಿದ್ದ ಗಾಯತ್ರಿ 14 ಲಕ್ಷ ಹಣವನ್ನ ಹಂತ-ಹಂತವಾಗಿ ನೀಡಿದ್ದರು. ಆದರೆ ಹಣ ಕೊಟ್ಟು ಒಂದೂವರೆ ವರ್ಷ ಕಳೆದರೂ ಕೆಲಸ ಸಿಕ್ಕಿಲ್ಲ. ಕೊಟ್ಟಿದ್ದ ಹಣವೂ ವಾಪಸ್ ಸಿಗಲಿಲ್ಲ. ಇದರಿಂದ ಕಂಗಾಲಾದ ಗಾಯತ್ರಿ ಹಣ ಕೊಟ್ಟ ದಾಖಲೆ ಸಮೇತ ಮಂಡ್ಯ ಪೂರ್ವ ಠಾಣೆಗೆ ದೂರು ನೀಡಿದ್ದರು. ಅದರ ಬೆನ್ನಲ್ಲೇ ಮಲ್ಲೇಶ್ ಎಂಬವರಿಂದ ಹೆಂಡತಿಗೆ ಕೆಲಸ ಕೊಡಿಸುವುದಾಗಿ 19 ಲಕ್ಷ ಹಾಗೂ ನೇತ್ರಾವತಿ ಎಂಬವರ ಪುತ್ರನಿಗೆ ನೌಕರಿ ಕೊಡಿಸುವುದಾಗಿ 18 ಲಕ್ಷ ಹಣ ಪಡೆದು ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದೇ ತಡ ಈತನ ವಂಚನೆ ಪುರಾಣ ಒಂದೊಂದೇ ಬೆಳಕಿಗೆ ಬಂದಿದೆ.

ಈ ಆಸಾಮಿ ಹಣ ಕೊಟ್ಟಿದ್ದವರಿಗೆ ನಂಬಿಸಿದ್ದೆ ರೋಚಕ. ಹಣ ಪಡೆಯುತ್ತಿದ್ದಂತೆ ಈತ, ನೀವು ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿ ನೇಮಕವಾಗಿದ್ದೀರಿ ಎಂದು ನಕಲಿ ನೇಮಕಾತಿ ಪತ್ರ ನೀಡುತ್ತಿದ್ದ. ಅಲ್ಲದೇ ಅಂಕಪಟ್ಟಿ, ದಾಖಲೆ ಪರಿಶೀಲನೆ ಇದೆ ಎಂದು ನೇರ ವಿಧಾನಸೌಧಕ್ಕೂ ಕರೆದುಕೊಂಡು ಹೋಗಿ, ತಾನೇ ಅಧಿಕಾರಿ ಬಳಿ ಓಡಾಡುವಂತೆ ಹೋಗಿ ನಂಬಿಸುತ್ತಿದ್ದ. ಇನ್ನೊಂದು ವಾರದಲ್ಲಿ ನಿಮಗೆ ಪೋಸ್ಟಿಂಗ್ ಆಗುತ್ತೆ ಎಂದು ನಂಬಿಸುತ್ತಿದ್ದ. ಅಷ್ಟೇ ಅಲ್ಲದೇ ಸಿಎಂ, ಸಚಿವರು, ಚೀಫ್ ಸೆಕ್ರೆಟರಿ ಸೇರಿದಂತೆ ಹಲವರ ಸಹಿಯಲ್ಲದೇ ವಿವಿಧ ಇಲಾಖೆಗಳ ಲೆಟರ್ ಹೆಡ್, ಸೀಲುಗಳನ್ನ ಮನೆಯಲ್ಲಿಯೇ ನಕಲು ಮಾಡುತ್ತಿರುವುದು ಮಹಜರು ವೇಳೆ ಪತ್ತೆಯಾಗಿದೆ. ಹತ್ತು ಹಲವು ಐಡಿ ಕಾರ್ಡ್‌ಗಳು ಸಿಕ್ಕಿವೆ.

ವಂಚಕ ವೆಂಕಟೇಶ್ ಕೇವಲ ಮೂವರಿಗಷ್ಟೇ ಅಲ್ಲ, ಬರೋಬ್ಬರಿ 30ಕ್ಕೂ ಹೆಚ್ಚು ಜನರಿಂದ 2 ಕೋಟಿಗೂ ಅಧಿಕ ಹಣ ಪಡೆದು ವಂಚನೆ ಮಾಡಿರುವ ಶಂಕೆ ಇದೆ. ದೊಡ್ಡ ಜಾಲವೂ ಇದರ ಹಿಂದೆ ಇದೆ ಎಂಬ ಮಾಹಿತಿಯಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

RELATED ARTICLES
- Advertisment -
Google search engine

Most Popular