ಮಂಡ್ಯ: ಪದವಿಪೂರ್ವ ಶಿಕ್ಷಣ ಇಲಾಖೆಯನ್ನು ಶಾಲಾ ಶಿಕ್ಷಣ ಇಲಾಖೆ ಗೆ ವಿಲೀನಗೊಳಿಸಲು ನಿರ್ಧಾರ ಮಾಡಿರುವ ಹಿನ್ನೆಲೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಆಸ್ಮಿತೆ ಕಾಪಾಡುವಂತೆ ಒತ್ತಾಯಿಸಿ ಪ್ರಾಂಶುಪಾಲರು , ಉಪನ್ಯಾಸಕರಿಂದ ಮಂಡ್ಯದ ಡಿಸಿ ಕಚೇರಿ ಬಳಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಕಪ್ಪು ಪಟ್ಟಿ ಕಟ್ಟಿಕೊಂಡು ಡಿಡಿಪಿಯು ಕಚೇರಿಯಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ತಕ್ಷಣವೇ ಪದವಿ ಪೂರ್ವ ಹೆಸರನ್ನು ಉಳಿಸಬೇಕು. ಯಾವುದೇ ಕಾರಣಕ್ಕೂ ಶಾಲಾ ಶಿಕ್ಷಣ ಇಲಾಖೆ ಜೊತೆ ಪದವಿ ಪೂರ್ವ ವಿಲೀನ ಮಾಡಬಾರದು ಎಂದು ಆಗ್ರಹಿಸಲಾಯಿತು. ಮಾಜಿ ಪರಿಷತ್ ಸದಸ್ಯ ಕೆ.ಟಿ ಶ್ರೀಕಂಠೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಸರ್ಕಾರ ಕೂಡಲೇ ಪಡೆದು ಪೂರ್ವ ಶಿಕ್ಷಣ ಇಲಾಖೆಯನ್ನು ಬಲಪಡಿಸಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಲಾಯಿತು. ನಂತರ ಡಿಸಿ ಮೂಲಕ ಸರ್ಕಾರಕ್ಕೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.