ಮಂಡ್ಯ: ಮೇಲುಕೋಟೆಯಲ್ಲಿ ನಡೆದ ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಡಿವೈಎಸ್ಪಿ ಮುರಳಿ ನೇತೃತ್ವದಲ್ಲಿ ಆರೋಪಿ ನಿತೀಶ್ ನನ್ನು ವಿಜಯನಗರ ಹೊಸಪೇಟೆಯಲ್ಲಿ ಬಂಧಿಸಲಾಗಿದೆ. ವಿಚಾರಣೆ ವೇಳೆ ದೀಪಿಕಾಳನ್ನು ಪ್ಲ್ಯಾನ್ ಮಾಡಿಯೇ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಆರೋಪಿ ನಿತೀಶ್ ಕೊಲೆಗೂ ಮುನ್ನ ಗುಂಡಿ ತೆಗೆದಿದ್ದನು. ನಂತರ ದೀಪಿಕಾರನ್ನು ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಅಡ್ಡಗಟ್ಟಿ ಕೊಲೆ ಮಾಡಿ ಹೂತು ಹಾಕಿದ್ದನು. ಘಟನೆ ನಡೆದ ಎರಡು ದಿನಗಳವರೆಗೂ ಏನು ನಡೆಯದಂತೆ ಸುಮ್ಮನಿದ್ದ ನಿತೀಶ್ ದೀಪಿಕಾಳ ಮೃತದೇಹ ಪತ್ತೆಯಾಗುತ್ತಿದಂತೆ ನಾಪತ್ತೆಯಾಗಿದ್ದನು. ಈ ಸಂಬಂಧ ದೀಪಿಕಾ ಪತಿ ಸಹ ನಿತೀಶ್ ಮೇಲೆ ಸಂಶಯ ವ್ಯಕ್ತಪಡಿಸಿದ್ದರಿಂದ ಆತನ ಜಾಡುಹಿಡಿದ ಪೊಲೀಸರು ವಿಜಯನಗರಲ್ಲಿ ತಲೆಮರೆಸಿಕೊಂಡಿರುದು ತಿಳಿದುಬಂದಿತ್ತು.
ಕೂಡಲೇ ಕಾರ್ಯಪ್ರವೃತ್ತರಾದ ಹೊಸಪೇಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಮೇಲುಕೋಟೆ ಠಾಣೆಗೆ ಕರೆತಂದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಹತ್ಯೆ ದಿನ ದೀಪಿಕಾ ಮತ್ತು ನಿತೀಶ್ ನಡುವೆ ಜಗಳ ನಡೆದಿದೆ. ಈ ಜಗಳದ ದೃಶ್ಯವನ್ನು ಮೇಲುಕೋಟೆ ಯೋಗನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಬಂದಿದ್ದ ಪ್ರವಾಸಿಗರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದರು. ಘಟನೆ ಬಳಿಕ ಪ್ರವಾಸಿಗರು ಪೊಲೀಸರಿಗೆ ವಿಡಿಯೋವನ್ನು ನೀಡಿದ್ದರು. ಇದೇ ಸ್ಥಳದಲ್ಲಿಯೇ ದೀಪಿಕಾ ಅವರ ಮೃತದೇಹ ಪತ್ತೆಯಾಗಿತ್ತು. ಇದಲ್ಲದೆ ಯುವಕ ತನ್ನ ತಂದೆಗೆ ಸಂದೇಶವೊಂದನ್ನು ರವಾನಿಸಿದ್ದು, ನನ್ನ ಹುಡುಕಬೇಡಿ, ಅಕ್ಕನಿಗೆ ಒಳ್ಳೆ ಕಡೆ ಮದುವೆ ಮಾಡಿ ಎಂದು ತಿಳಿಸಿರುವ ವಿಚಾರ ಕೂಡ ಇದೀಗ ಬೆಳಕಿಗೆ ಬಂದಿದೆ. ಈ ಎಲ್ಲಾ ಅಂಶಗಳು ಯುವಕ ಮೇಲೆ ಅನುಮಾನ ತೀವ್ರಗೊಳ್ಳುವಂತೆ ಮಾಡಿದೆ.
ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿ ನಿವಾಸಿಯಾಗಿದ್ದ ದೀಪಿಕಾ ಜನವರಿ 20ರಂದು ಎಂದಿನಂತೆ ಶಾಲೆಗೆ ಹೋಗಿದ್ದರು. ಆದರೆ ಮನೆಗೆ ವಾಪಸ್ ಆಗಿರಲಿಲ್ಲ. ಹೀಗಾಗಿ ತನ್ನ ಪತ್ನಿ ನಾಪತ್ತೆಯಾಗಿರುವುದಾಗಿ ಪತಿ ಲೋಕೇಶ್ ದೂರು ನೀಡಿದ್ದರು.