ಮಂಡ್ಯ : ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಕಾರು ಉರುಳಿ ಮೂವರು ಜಲಸಮಾಧಿ ಆಗಿರುವ ದುರ್ಘಟನೆ ಮಂಡ್ಯ ತಾಲ್ಲೂಕು ಮಾಚಹಳ್ಳಿ ಗ್ರಾಮದ ಸಮೀಪ ನಿನ್ನೆ ನಡೆದಿದೆ.
ಘಟನೆಯಲ್ಲಿ ಮಂಡ್ಯ ನಗರದ ಹಾಲಹಳ್ಳಿ ಸ್ಲಂ ಬಡಾವಣೆಯ ನಿವಾಸಿಗಳಾದ ಕಾಜು, ಫಯಾಜ್, ಅಸ್ಲಾಂ ಪಾಷಾ, ಫಿರ್‌ಖಾನ್ ಮೃತಪಟ್ಟಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಮತ್ತೋರ್ವ ಈಜಿ ದಡ ಸೇರಿದ್ದಾನೆ ಎನ್ನಲಾಗಿದೆ. ಪಾಂಡವಪುರದಿಂದ ಮಂಡ್ಯಕ್ಕೆ ತೆರಳುವ ವೇಳೆ ಮಂಡ್ಯ ತಾಲೂಕಿನ ಮಾಚಹಳ್ಳಿ ಬಳಿ ಹಾದು ಹೋಗುವ ಹುಲಿಕೆರೆ ಟನಲ್ ವಿ.ಸಿ.ನಾಲೆಗೆ ಕಾರು ಉರುಳಿತು ಎನ್ನಲಾಗಿದೆ.
ಮೃತ ಮೂವರ ಪೈಕಿ ಒಬ್ಬ ವ್ಯಕ್ತಿಯ ಶವ ಸ್ಥಳದಲ್ಲಿ ದೊರಕಿತು. ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿದರು. ಮೃತದೇಹಗಳನ್ನು ಮಂಡ್ಯ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು. ಈ ಸಂಬಂಧ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಸಿ ನಾಲೆಯ ಪಕ್ಕದಲ್ಲೇ ಮಂಡ್ಯ-ಪಾಂಡವಪುರ ಸಂಪರ್ಕ ರಸ್ತೆಯು ಹಾದುಹೋಗಿದ್ದು, ಕನಗನಮರಡಿ ಗ್ರಾಮದಿಂದ ಹುಲಿಕೆರೆ ತನಕದ ರಸ್ತೆಯ ಪಕ್ಕದಲ್ಲಿ ನಾಲೆ ಇರುವ ಕಾರಣ ಈ ಮಾರ್ಗ ಸಾಕಷ್ಟು ಅಪಾಯದಲ್ಲಿದೆ. ಈ ಮಾರ್ಗದಲ್ಲಿ ಈ ಹಿಂದೆಯೂ ಹಲವು ಅಪಘಾತಗಳು ನಡೆದು ಸಾಕಷ್ಟು ಸಾವುನೋವುಗಳು ಉಂಟಾಗಿದ್ದನ್ನು ಇಲ್ಲಿ ಸ್ಮರಿಸಬಹುದು.