ಮಂಡ್ಯ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕ್ಷಯ ರೋಗ ಪತ್ತೆ ಆಂದೋಲನ ಕಾರ್ಯಕ್ರಮಕ್ಕೆ ಮಂಡ್ಯದ ಕಾಳೀಕಾಂಭ ದೇವಸ್ಥಾನದ ಬಳಿಯ ಸ್ಲಂ ನಲ್ಲಿ ಕರ ಪತ್ರ ವಿತರಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಗಣಿಗ ರವಿಕುಮಾರ್, ಕ್ಷಯ ರೋಗ ಮಾರಕವಾದ ರೋಗ ಚಿಕಿತ್ಸೆ ಅಗತ್ಯ. ಜಿಲ್ಲೆಯಾದ್ಯಂತ ಇಂದಿನಿಂದ ಆಗಸ್ಟ್ 2ರವರೆಗೆ ಕ್ಷಯ ರೋಗ ಪತ್ತೆ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕ್ಷಯ ರೋಗ ಕಂಡುಬರುವ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಜೊತೆಗೆ 500 ರೂ ಮತ್ತು ಫುಡ್ ಕಿಟ್ ವಿತರಿಸಲಾಗುವುದು. ಸತತವಾಗಿ ಎರಡು ವಾರದಿಂದ ಕೆಮ್ಮು ಬರುತ್ತಿದ್ದರೆ ಕಫ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದರು.
ಈ ರೋಗವನ್ನು ಹೋಗಲಾಡಿಸಲು ಆರೋಗ್ಯ ಅಧಿಕಾರಿಗಳು ತುಂಬಾ ಶ್ರಮಪಡುತ್ತಿದ್ದಾರೆ. ಅವರಿಗೆ ಸಾರ್ವಜನಿಕರು ಸಹಕರಿಸಿ, ಮಂಡ್ಯ ಜಿಲ್ಲೆಯನ್ನು ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಬೇಕು. ಕಡ್ಡಾಯವಾಗಿ ಎಲ್ಲರೂ ಸಹ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.
ಇದೇ ವೇಳೆ ಡಿಎಚ್ ಓ ಡಾ. ಕೆ ಮೋಹನ್, ಟಿಎಚ್ಓ ಡಾ. ಜವರೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು.