ಅಂಗನವಾಡಿ ಕಟ್ಟಡಕ್ಕೆ ಗ್ರಾಮಸ್ಥರ ಆಗ್ರಹ
ಮಂಡ್ಯ: ಸೂಕ್ತ ಅಂಗನವಾಡಿ ಕೇಂದ್ರ ಇಲ್ಲದೆ ಪುಟ್ಟ ಮಕ್ಕಳು ಪ್ರಾಥಮಿಕ ಶಾಲೆಯ ಜಗಲಿಯಲ್ಲೆ ನಿತ್ಯ ಕುಳಿತುಕೊಳ್ಳಬೇಕಾದ ಸ್ಥಿತಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಬಂಡಬೊಯೀನಹಳ್ಳಿ ಗ್ರಾಮದಲ್ಲಿ ನಡೆದಿದೆ .
ಕಳೆದ 13 ವರ್ಷಗಳಿಂದ ಅಂಗನವಾಡಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ಸೂಕ್ತ ಕಟ್ಟಡವಿಲ್ಲದೆ ಮಳೆ ಗಾಳಿಯಲ್ಲಿಯೇ ಮುಗ್ಧ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಸುಸರ್ಜಿತ ಅಂಗನವಾಡಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತು ಗಿಡ ಗೆಡ್ಡೆಗಳ ತಾಣವಾಗಿರೋದು ಕಂಡು ಬಂದಿದೆ.

ಸೂಕ್ತ ಅಂಗನವಾಡಿ ಕಟ್ಟಡಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸೂಕ್ತ ಕಟ್ಟಡವಿಲ್ಲದೆ ನಮ್ಮ ಗ್ರಾಮದ ಮಕ್ಕಳು ಸರ್ಕಾರಿ ಶಾಲಾ ಹೊರಭಾಗದ ಜಗಲಿಯ ಮೇಲೆ ಬಿಸಿಲು ಗಾಳಿ ಮಳೆಯನ್ನು ಲೆಕ್ಕಿಸದೆ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಅವ್ಯವಸ್ಥೆಯಿಂದ ನಮ್ಮ ಗ್ರಾಮದ ಪುಟ್ಟ ಮಕ್ಕಳ ಶಿಕ್ಷಣ ಕುಂಠಿತಗೊಂಡಿದೆ. ಮಕ್ಕಳ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀಳುತ್ತಿದೆ. ಮಳೆ ಬಂದರೆ ಈ ಸ್ಥಳ ಸೋರುತ್ತದೆ.

ಇರುವ ಸರ್ಕಾರಿ ಶಾಲೆಯ ಸಣ್ಣ ಕೊಠಡಿಯಲ್ಲಿಯೇ ಅಡುಗೆ ಅನಿಲ ಸಿಲಿಂಡರ್ ಇಟ್ಟುಕೊಂಡು ಅಡುಗೆ ಮಾಡುತ್ತಾರೆ. ಪಕ್ಕದ ಕೊಠಡಿಯಲ್ಲಿ ಅಡುಗೆ ಸಾಮಗ್ರಿ ಶೇಖರಿಸಿಟ್ಟುಕೊಂಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಟ್ಟಡ ಪೂರ್ಣಗೊಳಿಸಲು ಚಿಂತಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.