ಮಂಡ್ಯ: ಕೆರಗೋಡು ಹನುಮ ಧ್ವಜ ತೆರವು ಹೋರಾಟದಲ್ಲಿ ಭಾಗಿಯಾಗಿದ್ದವರಿಗೆ ಪೊಲೀಸರಿಂದ ಕಿರುಕುಳ ಆರೋಪ ಖಂಡಿಸಿ ಕೆರಗೋಡು ಗ್ರಾಮದಲ್ಲಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ವಿವಾದಿತ ಧ್ವಜಸ್ಕಂಭಕ್ಕೆ ಪೂಜೆ ಸಲ್ಲಿಸಿ ಪ್ರತಿಭಟನೆ ಆರಂಭಿಸಿದ್ದು, ಪೊಲೀಸರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ಹನುಮ ಧ್ವಜ ಹೋರಾಟದಲ್ಲಿ ಭಾಗಿಯಾಗಿದ್ದ ಹಿಂದೂ ಕಾರ್ಯಕರ್ತರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ರೌಡಿ ಶೀಟ್ ತೆರೆಯಲು ಪೊಲೀಸರು ಮುಂದಾಗಿದ್ದಾರೆ. ರೌಡಿ ಶೀಟ್ ಓಪನ್ ಮಾಡುವ ಸಂಬಂಧ ಮೂವರಿಗೆ ನೋಟೀಸ್ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಪೊಲೀಸರ ಮೂಲಕ ಹಿಂದೂಗಳ ಹೋರಾಟ ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಹನುಮ ಮಂದಿರದಿಂದ ಪೊಲೀಸ್ ಠಾಣೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದ್ದು, ಹಿಂದೂ ಕಾರ್ಯಕರ್ತರ ಪ್ರತಿಭಟನೆಗೆ ಕೆಲ ಗ್ರಾಮಸ್ಥರು ಸಾಥ್ ನೀಡಿದ್ದಾರೆ.
ಮೆರವಣಿಗೆ ಉದ್ದಕ್ಕೂ ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆ ಕೂಗಿದ್ದಾರೆ.
ಧರ್ಮಕ್ಕಾಗಿ ಮಿಡಿಯದ ಹೃದಯ ಹೃದಯವೇ ಅಲ್ಲವೇ ಅಲ್ಲ. ಧರ್ಮಕ್ಕಾಗಿ ಕುದಿಯದ ರಕ್ತ ರಕ್ತವೇ ಅಲ್ಲ. ಎದೆ ತಟ್ಟಿ ಹೇಳು ನಾವೆಲ್ಲ ಹಿಂದು ಎಂದು ಘೋಷಣೆ ಕೂಗಿದ್ದಾರೆ.