ಬಳ್ಳಾರಿ: ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕನ್ನಡ ವಿಭಾಗಕ್ಕೆ ಮಂಗಳಮುಖಿ ರೇಣುಕಾ ಪೂಜಾರಿ ಅವರು ಅತಿಥಿ ಉಪನ್ಯಾಸಕರಾಗಿ ನೇಮಕವಾಗಿದ್ದಾರೆ.
ಕುರುಗೋಡು ತಾಲ್ಲೂಕಿನ ರೇಣುಕಾ ಅವರು ಈ ಹುದ್ದೆ ಪಡೆದ ರಾಜ್ಯದ ಮೊದಲ ಲಿಂಗತ್ವ ಅಲ್ಪಸಂಖ್ಯಾತ. ಸಂಡೂರಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಅವರು ಕರ್ತವ್ಯಕ್ಕೆ ಹಾಜರಾದರು. ನೇಮಕಾತಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಶೇ ೧ರ ಮೀಸಲಾತಿಯನ್ನು ವಿಶ್ವವಿದ್ಯಾಲಯ ಪಾಲಿಸುತ್ತಿದೆ. ನವೆಂಬರ್ ೨೮ರಂದು ರೇಣುಕಾ ಅವರ ಸಂದರ್ಶನವನ್ನು ಮಾಡಿದ ವಿಶ್ವವಿದ್ಯಾಲಯದ ಕುಲಪತಿ ಮುನಿರಾಜು ಮತ್ತು ಕುಲಸಚಿವ ರುದ್ರೇಶ್ ಅವರು ಹುದ್ದೆ ನೀಡಲು ನಿರ್ಧರಿಸಿದರು.
ನಮ್ಮದು ಬಡ ಕುಟುಂಬ. ತಂದೆ ಪೂಜಾರಿ ಮಲ್ಲಯ್ಯ, ತಾಯಿ ತಿಪ್ಪಮ್ಮ ಇಬ್ಬರೂ ಅನಕ್ಷರಸ್ಥರು. ಸಮಾಜ ಕೊಂಕು ನುಡಿದರೂ ತಂದೆ, ತಾಯಿ ನನ್ನನ್ನು ದೂರ ತಳ್ಳಲಿಲ್ಲ. ಕಷ್ಟಪಟ್ಟು ಈ ಹಂತಕ್ಕೆ ಬಂದಿರುವೆ. ಬಹಳಷ್ಟು ಅವಮಾನ ಎದುರಿಸಿದರೂ, ಹಲವರು ನನಗೆ ನೆರವಾಗಿದ್ದಾರೆ. ಜೋಗತಿ ಸಂಸ್ಕೃತಿ ಮತ್ತು ಚೌಡಿಕೆ ಪದಗಳ ಕುರಿತು ನಾನು ಪಿಎಚ್.ಡಿ ಮಾಡುವ ಗುರಿ ಹೊಂದಿದ್ದೇನೆ’ ಎಂದು ರೇಣುಕಾ ಪೂಜಾರಿ ತಿಳಿಸಿದರು.
ಮೀಸಲಾತಿ ಇದ್ದರೂ ರೇಣುಕಾ ತಮ್ಮ ಅರ್ಹತೆ ಆಧಾರದ ಮೇಲೆ ನೌಕರಿ ಪಡೆದಿದ್ದಾರೆ. ಈ ವಿಶ್ವವಿದ್ಯಾಲಯದಲ್ಲೇ ೨೦೨೦-೨೨ರ ಅವಧಿಯಲ್ಲಿ ಕನ್ನಡ ಎಂ.ಎ ಮಾಡಿದ್ದರು. ಅವರ ಶಿಕ್ಷಣಕ್ಕೆ ಇಂಗ್ಲಿಷ್ ವಿಭಾಗದ ರಾಬರ್ಟ್ ಜೋಸ್ ಎಂಬುವರು ಆರ್ಥಿಕ ನೆರವು ನೀಡಿದ್ದರು’ ಎಂದು ಕುಲಪತಿ ಮುನಿರಾಜು ತಿಳಿಸಿದರು.
ರೇಣುಕಾ ನಂತರದ ಬ್ಯಾಚ್ನಿಂದ ಬಳ್ಳಾರಿ ವಿಶ್ವವಿದ್ಯಾಲಯದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು, ಪೌರ ಕಾರ್ಮಿಕರ ಮಕ್ಕಳು, ಅಂಗವಿಲಕರಿಗೆ ಉಚಿತ ಶಿಕ್ಷಣ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಕುಲಸಚಿವ ರುದ್ರೇಶ್ ತಿಳಿಸಿದರು. ಯಲ್ಲಮ್ಮನ ದೀಕ್ಷೆ ಪಡೆದಿರುವ ರೇಣುಕಾ ರೇಣುಕಾ ಅವರು ಯಲ್ಲಮ್ಮನ ದೀಕ್ಷೆ ಪಡೆದು ಜೋಗತಿಯಾಗಿದ್ದಾರೆ. ಯಲ್ಲಮ್ಮನ ದೀಕ್ಷೆ ಪಡೆದ ಕಾರಣಕ್ಕೇ ಅವರು ತಮ್ಮ ಹೆಸರನ್ನು ರೇಣುಕಾ ಎಂದು ಬದಲಿಸಿಕೊಂಡಿದ್ದಾರೆ. ಅವರ ಮೊದಲ ಹೆಸರು ಮಲ್ಲೇಶ ಕೆ. ಜೋಗತಿ.
ದೀಕ್ಷೆ ಪಡೆದ ಬಳಿಕ ವಾರಕ್ಕೆ ಒಮ್ಮೆಯಾದರೂ ಪಡಲಗಿ ಹಿಡಿದು ಭಿಕ್ಷೆ ಪಡೆಯಬೇಕಾಗುತ್ತದೆ. ಜತೆಗೆ ಜನರ ಕಷ್ಟಗಳಿಗೆ ಸ್ಪಂದಿಸಬೇಕಾಗುತ್ತದೆ. ಬಡವರು ದುರ್ಬಲರಲ್ಲಿ ತಾಯಿ ಯಲ್ಲಮ್ಮಳನ್ನು ಕಾಣಬೇಕಾಗುತ್ತದೆ ಅವರಿಗೆ ಸಹಾಯ ಮಾಡಬೇಕಾಗುತ್ತದೆ. ಹಸಿದವರಿಗೆ ಅನ್ನಕೊಡಬೇಕಾಗುತ್ತದೆ’ ಎಂದು ರೇಣುಕಾ ಹೇಳಿದರು.