ಮಂಗಳೂರು(ದಕ್ಷಿಣ ಕನ್ನಡ): ನಿಲ್ಲಿಸಿದ್ದ ಲಾರಿಯೊಂದು ಇದ್ದಕ್ಕಿದ್ದಂತೆ ಮುಂದಕ್ಕೆ ಚಲಿಸಿ ಕಾರಿಗೆ ಡಿಕ್ಕಿ ಹೊಡೆದು ಬಸ್ ಕಾಯುತ್ತಿದ್ದ ವಿದ್ಯಾರ್ಥಿನಿ ಮತ್ತು ಶಿಕ್ಷಕಿಗೆ ಡಿಕ್ಕಿ ಹೊಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೆಲ್ಕಾರ್ ಎಂಬಲ್ಲಿ ನಡೆದಿದೆ.
ವಿದ್ಯಾರ್ಥಿನಿ ಹಜ್ರಾ ಶಾಮ (20) ಹಾಗೂ ಖತೀಜಾತುಲ್ ಆಫಿಯಾ (18) ಗಾಯಗೊಂಡವರು.
ಕೆ.ಎನ್.ಆರ್.ಸಿ.ಕಂಪೆನಿಗೆ ಸೇರಿದ ಲಾರಿಯೊಂದು ಮೆಲ್ಕಾರ್ ನಲ್ಲಿ ಅಪಘಾತಕ್ಕೆ ಕಾರಣವಾಗಿದೆ.

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೆಲ್ಕಾರ್ ಎಂಬಲ್ಲಿ ಸರ್ವೀಸ್ ರಸ್ತೆಯಲ್ಲಿ ಲಾರಿಯ ಚಾಲಕ ರಸ್ತೆಯಲ್ಲಿ ಲಾರಿ ನಿಲ್ಲಿಸಿ ಅಂಗಡಿಗೆ ಹೋಗಿದ್ದ. ಆದರೆ ಹ್ಯಾಂಡ್ ಬ್ರೇಕ್ ಹಾಕದ ಕಾರಣ ಲಾರಿ ಮುಂದೆ ಚಲಿಸಿದ್ದು ಅಲ್ಲಿಯೇ ಇದ್ದ ಒಮ್ನಿ ಕಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಮುಂದೆ ಸಾಗಿದ ಲಾರಿ ಬಸ್ ಗಾಗಿ ಕಾಯುತ್ತಿದ್ದ ಶಿಕ್ಷಕಿ ಹಾಗೂ ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದು ಬಳಿಕ ರಸ್ತೆ ಬದಿಗೆ ವಾಲಿ ನಿಂತಿದೆ. ಡಿಕ್ಕಿಹೊಡೆದ ಪರಿಣಾಮ ಅವರಿಬ್ಬರೂ ರಸ್ತೆ ಬದಿಯಲ್ಲಿರುವ ನೀರು ಹೋಗುವ ಸಣ್ಣ ಹೊಂಡಕ್ಕೆ ಬಿದ್ದಿದ್ದಾರೆ. ಇಬ್ಬರಿಗೂ ಗಾಯವಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.