ಮಂಗಳೂರು(ದಕ್ಷಿಣ ಕನ್ನಡ): ರಾಷ್ಟ್ರೀಯ ಶಿಕ್ಷಣ ನೀತಿ (ಎನ್ ಇಪಿ) ರದ್ದುಗೊಳಿಸದಿರಲು ಆಗ್ರಹಿಸಿ ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಶನ್ ಸಂಸ್ಥೆ ವತಿಯಿಂದ ಸೆಪ್ಟೆಂಬರ್ 14ರಂದು ಸಂಜೆ 4ಕ್ಕೆ ಮಂಗಳೂರು ನಗರದ ಡೊಂಗರಕೇರಿ ಕೆನರಾ ಹೈಸ್ಕೂಲ್ ಭುವನೇಂದ್ರ ಸಭಾಭವನದಲ್ಲಿ ಶಿಕ್ಷಣ ತಜ್ಞರ ಸಭೆ ಆಯೋಜಿಸಲಾಗಿದೆ.
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಶನ್ ಸಂಚಾಲಕರಾದ ಮಂಗಳೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ರಮೇಶ ಕೆ. ಅವರು, ಸರಕಾರ ಕೇವಲ ತನ್ನ ಪ್ರತಿಷ್ಠೆಗಾಗಿ ಎನ್ ಇಪಿಯನ್ನು ರದ್ದುಪಡಿಸಲು ಹೊರಟಿದೆ. ಶಿಕ್ಷಣ ವಿರೋಧಿ, ವಿದ್ಯಾರ್ಥಿ ವಿರೋಧಿ ಸರಕಾರದ ವಿರುದ್ಧ ಶಿಕ್ಷಣ ತಜ್ಞರ ಸಭೆ ನಡೆಸುವ ಮೂಲಕ ಎಚ್ಚರಿಸಲಿದ್ದೇವೆ. ಸಭೆಗೆ ಮುಖ್ಯ ವಕ್ತಾರರಾಗಿ ಬೆಂಗಳೂರಿನ ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆ, ವಿಟಿಯು ಬೆಳಗಾವಿಯ ವಿಶ್ರಾಂತ ಕುಲಪತಿ ಪ್ರೊ. ಕರಿಸಿದ್ದಪ್ಪ, ಸೆಸ್ ಬೆಂಗಳೂರಿನ ನಿರ್ದೇಶಕ ಗೌರೀಶ ಆಗಮಿಸಲಿದ್ದಾರೆ. ಶಿಕ್ಷಣ ತಜ್ಞರ ಅಭಿಪ್ರಾಯವನ್ನು ಅಲಿಸಲು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ನಳಿನ್‌ಕುಮಾರ್ ಕಟೀಲು, ಮಾಜಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಭಾಗವಹಿಸುವರು ಎಂದರು.