ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ಜೆಪ್ಪು ಶ್ರೀ ಜನಾರ್ಧನ ಭಜನಾ ಮಂದಿರವು 75ನೇ ವರ್ಷ ಅಮೃತಮಹೋತ್ಸವದ ಶುಭ ಸಂದರ್ಭದಲ್ಲಿದೆ. ಈ ಹಿನ್ನೆಲೆಯಲ್ಲಿ ಅಖಂಡ ಭಜನಾ ಸಪ್ತಾಹವು ಎಪ್ರಿಲ್ 4 ರಿಂದ 13ರವರೆಗೆ ನಡೆಯಲಿದೆ ಎಂದು ಅಮೃತ ಮಹೋತ್ಸವದ ಪ್ರಧಾನ ಸಂಚಾಲಕ ಜೆ. ಪುಂಡಲೀಕ ಸುವರ್ಣ ಹೇಳಿದ್ದಾರೆ. ಅವರು ಇಂದು ಮಂಗಳೂರು ನಗರದಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಸುಮಾರು 75 ವರ್ಷಗಳ ಹಿಂದೆ ಜಪ್ಪಿನಮೊಗರು ಗ್ರಾಮದಲ್ಲಿ ಜಪ್ಪುಬಪ್ಪಾಲ್ ಎಂಬ ಪ್ರದೇಶವು ಕುಗ್ರಾಮವಾಗಿದ್ದು, ಮೂಲ ಸೌಕರ್ಯ ಇಲ್ಲದ ಪ್ರದೇಶವಾಗಿತ್ತು. ಈ ಸ್ಥಳದಲ್ಲಿ ದಿ. ವಾರಪ್ಪ ಪೂಜಾರಿಯವರ ಮನೆಯ ಒಂದು ಕೋಣೆಯಲ್ಲಿ 1950 ಜನವರಿ 21 ರಂದು ಶ್ರೀ ಜನಾರ್ಧನ ಸ್ವಾಮಿಯ ಪೂಜೆ ಹಾಗೂ ಭಜನೆಯು ಪ್ರಾರಂಭವಾಯಿತು. ಮುಂದಿನ ದಿನಗಳಲ್ಲಿ ಆಧ್ಯಾತ್ಮಿಕ ಕೇಂದ್ರವಾಗಿ ಬೆಳೆದು ಭಕ್ತಿಯ ಸಿಂಚನದೊಂದಿಗೆ ಶ್ರೀ ಜನಾರ್ಧನ ಭಜನಾ ಮಂದಿರವು ದಿ. ಸೇಸಪ್ಪ ಕೋಟ್ಯಾನ್ ಇವರ ನೇತೃತ್ವದಲ್ಲಿ ರೂಪುಗೊಂಡಿತ್ತು. ಭಕ್ತರ ಇಷ್ಟಾರ್ಥವನ್ನು ಈಡೇರಿಸುವ ಜನಾರ್ಧನ ಸ್ವಾಮಿಯ ಭಕ್ತರ ಸಂಖ್ಯೆ ಹೆಚ್ಚುತ್ತಾ ಹೋಯಿತು ಎಂದು ಮಾಹಿತಿ ನೀಡಿದರು.