ಮಂಗಳೂರು (ದಕ್ಷಿಣ ಕನ್ನಡ): ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಮಂಗಳೂರಲ್ಲಿರೋ ಅಕಾಡೆಮಿ ಕಚೇರಿ ಆವರಣದ ಸಾಮರ್ಥ್ಯ ಸೌಧದ ಸಭಾಂಗಣದಲ್ಲಿ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಮಾತನಾಡಿದ ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕರ್ ಸಿದ್ದೀಕ್,
ಬ್ಯಾರಿ ಭಾಷೆ, ಸಾಹಿತ್ಯದ ತಳಸ್ಪರ್ಶಿ ಅಧ್ಯಯನ ನಡೆಸುವ ಮೂಲಕ ಜಾಗತಿಕ ಮಟ್ಟದಲ್ಲಿ ಬ್ಯಾರಿ ಭಾಷೆ ಯನ್ನು ಗುರುತಿಸುವಂತಾಗಬೇಕು ಎಂದರು. ಬ್ಯಾರಿ ಭಾಷಾ ದಿನಾಚರಣೆ ಮತ್ತದರ ಮಹತ್ವದ ಬಗ್ಗೆ ಉಪನ್ಯಾಸ ನೀಡಿದ ಬ್ಯಾರಿ ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯ ಹಂಝ ಮಲಾರ್ ಬ್ಯಾರಿ ಭಾಷೆ, ಸಂಸ್ಕೃತಿಯ ಉಳಿವು ಬ್ಯಾರಿ ಮುಸ್ಲಿಮರ ಕೈಯಲ್ಲಿದೆ. ಅದಕ್ಕಾಗಿ ಮರೆತು ಹೋದ ಹಳೆಯ ಬ್ಯಾರಿ ಪದಗಳನ್ನು ಮತ್ತೆ ಬಳಸಲು ಮುಂದಾಗಬೇಕು ಎಂದರು. ಸಹಾಯಕ ನಿರ್ದೇಶಕ ರಾಜೇಶ್ ಜಿ. ಮಾತನಾಡಿ, ಬ್ಯಾರಿ ಸಮುದಾಯದ ಪ್ರಾಚೀನ ವಸ್ತುಗಳ ಸಂಗ್ರಹಾಲಯ ಸ್ಥಾಪಿಸಬೇಕು.
ಮಂಗಳೂರಿನಲ್ಲಿ ಬ್ಯಾರಿ ಸಮ್ಮೇಳನ ಆಯೋಜಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗಾಯಕ ಶರೀಫ್ ನಿರ್ಮುಂಜೆ ಬ್ಯಾರಿ ಧ್ಯೇಯ ಗೀತೆ ಹಾಡಿದರು. ಬ್ಯಾರಿ ಸಂಘಟನೆಗಳ ಪ್ರಮುಖರಾದ ಮುಹಮ್ಮದ್ ಅಲಿ ಕಮ್ಮರಡಿ, ಬಶೀರ್ ಬೈಕಂಪಾಡಿ, ಆಲಿಕುಂಞಿ ಪಾರೆ, ಅಹ್ಮದ್ ಬಾವಾ ಪಡೀಲ್, ಡಿಎಂ ಅಸ್ಲಂ, ಮುಹಮ್ಮದ್ ಕುಂಜತ್ತಬೈಲ್, ಲೇಖಕಿ ಆಯಿಶಾ ಯುಕೆ, ಡಾ. ಅಬೂಬಕ್ಕರ್ ಸಿದ್ದೀಕ್ ವಗ್ಗ, ಇಂಜಿನಿಯರ್ ಝಾಕಿರ್ ಹುಸೈನ್, ಮುಹಮ್ಮದ್ ಸಾಲಿ ಮರವೂರು ಮತ್ತಿತರರು ಉಪಸ್ಥಿತರಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ಆರ್.ಮನೋಹರ ಕಾಮತ್ ಸ್ವಾಗತಿಸಿದರು. ಅಕಾಡೆಮಿಯ ನಿಕಟಪೂರ್ವ ಸದಸ್ಯ ಶಂಶೀರ್ ಬುಡೋಳಿ ಕಾರ್ಯಕ್ರಮ ನಿರೂಪಿಸಿದರು.