ಕಾರವಾರ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಯಲ್ಲಿ ಮೂಲತಃ ಮಂಗಳೂರಿನವರಾದ ಸಿಎ ಅಕ್ಷತಾ ಪೈ (27) ಮೃತಪಟ್ಟಿದ್ದಾರೆ. ಆಕೆಯ ಮೃತದೇಹವನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ನಗರದಲ್ಲಿನ ಪತಿಯ ಮನೆಗೆ ತರಲಾಗಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಮೂಲತಃ ಅಕ್ಷತಾ ಮಂಗಳೂರಿನ ಮೂಲ್ಕಿಯವರಾಗಿದ್ದು ಸಿಎ ಪರೀಕ್ಷೆಯಲ್ಲಿ ಚಿನ್ನದ ಪದಕ ವಿಜೇತೆಯಾಗಿದ್ದರು. ಒಂದೂವರೆ ವರ್ಷದ ಹಿಂದೆ ಇಂಜಿನಿಯರ್ ಆಗಿರುವ ಸಿದ್ದಾಪುರ ನಗರದ ಆಶಯ್ ಅವರನ್ನು ಮದುವೆಯಾಗಿದ್ದರು.
ಅಕ್ಷತಾ ಹಾಗೂ ಆಶಯ್ ದಂಪತಿಗಳಿಬ್ಬರೂ ಆರ್‌ಸಿಬಿ ಅಭಿಮಾನಿಗಳಾಗಿದ್ದರು. ಹೀಗಾಗಿ ಬುಧವಾರ ಮಧ್ಯಾಹ್ನ ಕಚೇರಿಗೆ ರಜೆ ಹಾಕಿ, ಇಬ್ಬರೂ ಆರ್‌ಸಿಬಿ ಟೀಶರ್ಟ್ ಧರಿಸಿ ರೋಡ್ ಶೋನಲ್ಲಿ ಭಾಗವಹಿಸಲು ತೆರಳಿದ್ದರು. ಆದರೆ ರೋಡ್ ಶೋ ರದ್ದಾದ ಹಿನ್ನೆಲೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಇಬ್ಬರೂ ತೆರಳಿದ್ದರು.
ಕ್ರೀಡಾಂಗಣದ ಗೇಟ್ ನಂಬರ್ 17ರಿಂದ ದಂಪತಿ ಒಳಗೆ ಹೋಗುತ್ತಿದ್ದರು. ಈ ವೇಳೆ ಕಾಲ್ತುಳಿತ ಉಂಟಾಗಿ ಅಕ್ಷತಾ, ಆಶಯ್‌ನಿಂದ ಬೇರ್ಪಟ್ಟಿದ್ದರು. ಈ ಸಂದರ್ಭ ಇಬ್ಬರೂ ಕಾಲ್ತುಳಿತಕ್ಕೊಳಗಾದರೂ ಓರ್ವ ಮಹಿಳೆ, ಆಶಯ್‌ರನ್ನು ರಕ್ಷಣೆ ಮಾಡಿದ್ದರು. ಆದರೆ ಅಕ್ಷತಾ ಜನರ ಕಾಲಡಿ ಸಿಕ್ಕಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.