ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಗಣೇಶ ಚತುರ್ಥಿ ಹಬ್ಬದ ಸಡಗರದ ಮಧ್ಯೆ ಕ್ರೈಸ್ತರು ಮಾತೆ ಮೇರಿಯ ಜನ್ಮ ದಿನ ಆಚರಣೆಯನ್ನು ಸಂಭ್ರಮದಿಂದ ಆಚರಿಸಿದರು.
ಕರಾವಳಿಯ ಪ್ರಮುಖ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗಗಳಲ್ಲಿ ಸಂಭ್ರಮ ಕಳೆಗಟ್ಟಿತ್ತು. ಅಲ್ಲಲ್ಲಿ ಮಾತೆ ಮೇರಿಯ ಮೂರ್ತಿಯೊಂದಿಗೆ ಭವ್ಯ ಮೆರವಣಿಗೆಗಳನ್ನು ಆಯೋಜಿಸಲಾಗಿತ್ತು.
ಬುಟ್ಟಿ ತುಂಬಾ ಹೂವು ಹೊತ್ತ ಪುಟಾಣಿಗಳು ಹೊಸ ಬಟ್ಟೆ ತೊಟ್ಟು ಗುರು ಹಿರಿಯರೊಂದಿಗೆ ಇಗರ್ಜಿಗಳ ಆವರಣದಲ್ಲಿ ಹೂವು ಚೆಲ್ಲಿ ಮಾತೆ ಮೇರಿಯನ್ನು ಅಭಿನಂದಿಸಿದರು. ಇದೇ ಸಂದರ್ಭ ಹೊಸ ಬೆಳೆಯ ಹಸಿರು ತೆನೆಯನ್ನು ಧರ್ಮಗುರುಗಳು ಸ್ವಾಗತಿಸಿದರು. ಕ್ರೈಸ್ತರ ತೆನೆ ಹಬ್ಬದ ಪ್ರಯುಕ್ತ ವಿವಿಧ ಇಗರ್ಜಿಯಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆದು ಬಳಿಕ ತೆನೆ ಹಾಗೂ ಕಬ್ಬನ್ನು ಕ್ರೈಸ್ತ ಕುಟುಂಬದ ಪ್ರತಿ ಮನೆಗಳಿಗೂ ಹಂಚಲಾಯಿತು.

ಮಂಗಳೂರಿನ ಅನೇಕ ಚರ್ಚುಗಳಲ್ಲೂ ಮೊಂತಿ ಫೆಸ್ತ್ ಸಂಭ್ರಮ ಮನೆ ಮಾಡಿತ್ತು. ನಗರದ ಕುಲಶೇಖರ ಪವಿತ್ರ ಶಿಲುಬೆಯ ಚರ್ಚಿನಲ್ಲೂ ಸಂಭ್ರಮ ಮನೆ ಮಾಡಿತ್ತು. ಮಾತೆ ಮೇರಿ ವಿಗ್ರಹದೊಂದಿಗೆ ಭತ್ತದ ತೆನೆಯೊಂದಿಗೆ ತೆರೆದ ವಾಹನದಲ್ಲಿ ಮೈದಾನದಲ್ಲಿ ಭವ್ಯ ಮೆರವಣಿಗೆ ಆಯೋಜಿಸಲಾಗಿತ್ತು.
ಚರ್ಚ್ ನ ಹಿರಿಯ ಧರ್ಮಗುರುಗಳಾದ ಕ್ಲಿಫರ್ಡ್ ಫೆರ್ನಾಂಡಿಸ್ ಅವರೊಂದಿಗೆ ಸಹಾಯಕ ಗುರುಗಳಾದ ವಿಜಯ್ ಮೊಂತೆರೊ ಮತ್ತು ಪಾಲ್ ಸೆಬಾಸ್ಟಿಯನ್ ಡಿಸೋಜಾ ಉತ್ಸವ ಪ್ರಾರ್ಥನೆಯನ್ನು ನೆರವೇರಿಸಿಕೊಟ್ರು.
