ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ನಗರದ ರಥಬೀದಿಯ ಅಂಗಡಿಗಳಿಂದ ವಶಪಡಿಸಿಕೊಳ್ಳಲಾಗಿದ್ದ ಚಾಕೋಲೆಟ್ ನಲ್ಲಿ ಗಾಂಜಾ ಅಂಶ ಪತ್ತೆಯಾಗಿರುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ರಥಬೀದಿಯ ವೈಭವ್ ಪೂಜಾ ಸೇಲ್ಸ್ ಅಂಗಡಿಗೆ ಜುಲೈ 19ರಂದು ದಾಳಿ ನಡೆಸಿದ್ದ ಬಂದರು ಪೊಲೀಸರು ತಲಾ 40 ಚಾಕೋಲೆಟ್ ನ 300 ಪ್ಯಾಕೆಟ್‌ಗಳನ್ನು ಮತ್ತು 592 ಬಿಡಿ ಚಾಕೋಲೆಟ್ ಗಳನ್ನು ವಶಪಡಿಸಿಕೊಂಡಿದ್ದರು. ಇದರ ಮೌಲ್ಯ 48 ಸಾವಿರ ರೂ. ಎಂದು ಅಂದಾಜಿಸಲಾಗಿತ್ತು. ಅಂಗಡಿಯ ಮಾಲಕ ಮನೋಹರ ಶೇಟ್ ವಿರುದ್ಧ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದೇ ದಿನ ಪಾಂಡೇಶ್ವರ ಪೊಲೀಸರು ಗೂಡಂಗಡಿಗೆ ದಾಳಿ ನಡೆಸಿ 5,500 ರೂಪಾಯಿ ಮೌಲ್ಯದ ಚಾಕೋಲೆಟ್ ವಶಪಡಿಸಿಕೊಂಡು ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ಕರ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಪೊಲೀಸರು ಈ ಚಾಕೋಲೆಟ್ ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಅಲ್ಲಿಂದ ಬಂದ ವರದಿಯಲ್ಲಿ ಈ ಚಾಕೋಲೆಟ್ ನಲ್ಲಿ ಮಾದಕ ದ್ರವ್ಯ ಗಾಂಜಾದ ಅಂಶ ಇರುವುದಾಗಿ ತಿಳಿಸಲಾಗಿದೆ. ಅದರಂತೆ ಇಬ್ಬರು ಆರೋಪಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.