ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ಮಹಾನಗರ ಪಾಲಿಕೆಯ ಮುಂದಿನ ಅವಧಿಗೆ ಮೇಯರ್ ಆಗಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 17 ಮನಪಾ ಸದಸ್ಯ ಮನೋಜ್ ಕುಮಾರ್ ಕೋಡಿಕಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಮೇಯರ್ ಆಗಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 58ರ ಸದಸ್ಯೆ ಭಾನುಮತಿ ಪಿ.ಎಸ್. ಆಯ್ಕೆಯಾಗಿದ್ದಾರೆ.
ಗುರುವಾರ ಮಂಗಳೂರು ಪಾಲಿಕೆಯಲ್ಲಿ ಮೇಯರ್ ಉಪಮೇಯರ್ ಹುದ್ದೆಗೆ ಚುನಾವಣೆ ನಡೆಯಿತು. ಮೇಯರ್ ಹುದ್ದೆಗೆ “ಎಸ್ ಸಿ” ಮೀಸಲಾತಿಯಡಿ ಕಾಂಗ್ರೆಸ್ ಅಭ್ಯರ್ಥಿಗಳು ಇಲ್ಲದ ಕಾರಣದಿಂದ ಮೇಯರ್ ಆಯ್ಕೆ ಅವಿರೋಧವಾಗಿ ನಡೆಯಿತು.
ಪಾಲಿಕೆಯಲ್ಲಿ ಪ್ರಸಕ್ತ ಬಿಜೆಪಿ ಆಡಳಿತ ಮುಂದಿನ ವರ್ಷದ ಫೆಬ್ರವರಿ 27ರವರೆಗೆ ಇರುವ ಕಾರಣದಿಂದ ಸುಮಾರು ಐದೂವರೆ ತಿಂಗಳು ಮಾತ್ರ ಮೇಯರ್ , ಉಪಮೇಯರ್ ಅಧಿಕಾರಾವಧಿ ಇರಲಿದೆ. ಮೈಸೂರು ಪ್ರಾದೇಶಿಕ ಆಯುಕ್ತ ರಮೇಶ್ ಡಿ.ಎಸ್. ಪಾಲಿಕೆಯ ಮಂಗಳ ಸಭಾಂಗಣ ದಲ್ಲಿ ಚುನಾವಣಾ ಪ್ರಕ್ರಿಯೆ ನಿರ್ವಹಿಸಿದರು.
ಇದೇ ವೇಳೆ ಮಾತನಾಡಿದ ನೂತನ ಮೇಯರ್ ಮನೋಜ್ ಕುಮಾರ್, ರಾಜ್ಯದಲ್ಲಿ ಬೆಂಗಳೂರು ಬಳಿಕ ಅತೀ ದೊಡ್ಡ ಹಾಗೂ ಶೀಘ್ರ ಗತಿಯಲ್ಲಿ ಬೆಳೆವಣಿಗೆ ಕಾಣುತ್ತಿರುವ ಮಂಗಳೂರು ನಗರದ ಅಭಿವೃದ್ಧಿಗೆ ನಾನು ಮೊದಲ ಆದ್ಯತೆ ನೀಡುತ್ತೇನೆ ಎಂದರು.