ಮಂಗಳೂರು (ದಕ್ಷಿಣ ಕನ್ನಡ): ಬಾಂಗ್ಲಾ ಸೇರಿದಂತೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹಿಂದುಗಳನ್ನು ಗುರಿಯಾಗಿಸಿ ದೌರ್ಜನ್ಯ ನಿರಂತರ ವಾಗಿ ನಡೆಯುತ್ತಿದೆ. ಜಗತ್ತಿನಲ್ಲೇ ಹಿಂದುತ್ವ ನಾಶ ಮಾಡಬೇಕು ಎನ್ನುವುದು ಬಾಂಗ್ಲಾ ಸಂಚಿನ ಭಾಗವಾಗಿದೆ ಎಂದು ವಿಶ್ವಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದ್ದಾರೆ.
ಹಿಂದೂ ಹಿತರಕ್ಷಣಾ ಸಮಿತಿ ದ.ಕ.ಜಿಲ್ಲೆ ಇದರ ವತಿಯಿಂದ ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ, ಅವರ ರಕ್ಷಣೆಗೆ ಆಗ್ರಹಿಸಿ ಮಂಗಳೂರಿನಲ್ಲಿ ಬುಧವಾರ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಬಾಂಗ್ಲಾದೇಶದ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ನಡೆದ ಪ್ರತಿಭಟನೆ ಚಿತ್ರೀಕರಣಕ್ಕೆ ತೆರಳಿದ ಮಾಧ್ಯಮ ಮಂದಿಯನ್ನು ತಳ್ಳಿ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ನಗರದ ಕ್ಲಾಕ್ ಟವರ್ ಬಳಿ ಬ್ಯಾರಿಕೇಡ್‌ಗಳನ್ನು ಬದಿಗೊತ್ತಿದ ಪ್ರತಿಭಟನಾಕಾರರು ರಸ್ತೆ ತಡೆಗೆ ಮುಂದಾಗಿದ್ದರು. ಆಗ ಪೊಲೀಸರು ಮಧ್ಯಪ್ರವೇಶಿಸಿ ರಸ್ತೆ ತಡೆಗೆ ಯತ್ನಿಸಿದವರನ್ನು ತಡೆದರು.
ಚಕಮಕಿಗೆ ಕಾರಣವಾಯಿತು. ಈ ವಿದ್ಯಮಾನದ ಚಿತ್ರೀಕರಣ ನಡೆಸುತ್ತಿದ್ದ ಇಬ್ಬರು ಖಾಸಗಿ ಚಾನಲ್‌ನ ಕ್ಯಾಮರಾಮನ್‌ಗಳನ್ನು ತಳ್ಳಿದ ಪ್ರತಿಭಟನಾಕಾರರು ಹಲ್ಲೆಗೆ ಯತ್ನಿಸಿದ ಘಟನೆಯೂ ನಡೆಯಿತು. ಹಲ್ಲೆಗೆ ಯತ್ನ ನಡೆದ ಹಿನ್ನೆಲೆಯಲ್ಲಿ ಮಾಧ್ಯಮ ಮಂದಿ ವರದಿಗಾರಿಕೆಯನ್ನು ಬಹಿಷ್ಕರಿಸಿ ಅಲ್ಲಿಂದ ಹೊರನಡೆದರು.