ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ಬಜ್ಪೆ ಭಟ್ರಕೆರೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಿಕ್ಷಾ ನಿಲ್ದಾಣ ಇಂದು ಉದ್ಘಾಟನೆಗೊಂಡಿತು. ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಇಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಐವನ್ ಡಿʼಸೋಜಾ, ರಿಕ್ಷಾ ಚಾಲಕರು ಜವಾಬ್ದಾರಿಯಿಂದ ರಿಕ್ಷಾ ಚಾಲನೆ ಮಾಡುವುದರ ಜೊತೆಗೆ ಸರಕಾರದಿಂದ ಸಿಗುವ ಪ್ರಯೋಜಗಳನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ರಾಜ್ಯ ಮೋಟಾರ್ ವಾಹನಕ್ಕೆ ಸಂಬಂಧಪಟ್ಟ ಅಸಂಘಟಿತ ಕಾರ್ಮಿಕರಿಗೆ ಸರಕಾರ ಈಗಾಗಲೇ ಅನೇಕ ಯೋಜನೆಗಳನ್ನು ತಂದಿದ್ದು, ಅದನ್ನು ನೋಂದಾವಣೆ ಮಾಡುವ ಮೂಲಕ ತಮ್ಮ ಕುಟುಂಬದ ರಕ್ಷಣೆಗೆ ಮುಂದಾಗಬೇಕೆಂದು ಕರೆ ನೀಡಿದರು.
ರಿಕ್ಷಾ ಚಾಲನೆ ವೃತ್ತಿ ಇಂದು ಗೌರವಯುತ ವೃತ್ತಿಯಾಗಿದ್ದು, ಸರಕಾರದಿಂದ ಏನನ್ನೂ ಸವಲತ್ತು ಬಯಸದೇ ತಮ್ಮ ದುಡಿಮೆಯ ಮೂಲಕ ಸರಕಾರಕ್ಕೆ ಮತ್ತು ಸಮಾಜಕ್ಕೆ ಉತ್ತಮವಾದ ಕೊಡುಗೆ ನೀಡುವಂತಹ ರಿಕ್ಷಾ ಚಾಲಕರಿಗೆ ಗೌರವ ಸಿಗುವ ರೀತಿ ಕೆಲಸ ಮಾಡಬೇಕೆಂದು ಕರೆ ನೀಡಿದರು.