ಮಂಗಳೂರು (ದಕ್ಷಿಣ ಕನ್ನಡ): ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರದ ವತಿಯಿಂದ ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ನಡೆದ ಗೊಂದಲದ ವಿರುದ್ಧ ಮಂಗಳೂರು ನಗರದ ರಥಬೀದಿಯಲ್ಲಿರುವ ಡಿ.ಡಿ.ಪಿ.ಯು ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಎ.ಬಿ.ವಿ.ಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಶ್ರೀರಾಮ ಅಂಗೀರಸ ಅವರು ಮಾತನಾಡಿ, ವಿದ್ಯಾರ್ಥಿ ಪರಿಷತ್ ಇಂದು ಮೂರುವರೆ ಲಕ್ಷ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿಯನ್ನು ಎತ್ತಿ ರಾಜ್ಯಾದ್ಯಂತ ಹೋರಾಟವನ್ನು ಮಾಡುತ್ತಿದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ಮೇಲೆ ನಂಬಿಕೆ ಇರಿಸಿ ವರ್ಷ ಪೂರ್ತಿ ಹಗಲು ರಾತ್ರಿ ತಯಾರಿಯನ್ನು ನಡೆಸಿ ಉತ್ತಮ ಕಾಲೇಜುಗಳಿಗೆ ಪ್ರವೇಶಾತಿ ಪಡೆಯುವ ಕನಸನ್ನು ಕಂಡಿರುತ್ತಾರೆ. ಶಿಕ್ಷಣ ಕ್ಷೇತ್ರದ ಬಗ್ಗೆ ಕನಿಷ್ಟ ಕಾಳಜಿ ಇರುವ ಈ ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಗೆಡವಿದೆ.
ಪರೀಕ್ಷೆ ನಡೆದು ಮೂರು ನಾಲ್ಕು ದಿನ ಕಳೆದರೂ ಶಿಕ್ಷಣ ಸಚಿವರು ಒಂದು ಹೇಳಿಕೆಯನ್ನೂ ನೀಡದೇ ಇರುವುದು ರಾಜ್ಯ ಸರ್ಕಾರಕ್ಕೆ ಚುಣಾವಣೆ ಮತಗಳಿಕೆ ಮತ್ತು ಓಟ್ ಬ್ಯಾಂಕ್ ಗಳೇ ಆದ್ಯತೆಯ ವಿಷಯಗಳಾಗಿದೆ ಎಂಬುದನ್ನು ತಿಳಿಸುತ್ತದೆ. ಹಾಗಾಗಿ ರಾಜ್ಯ ಸರ್ಕಾರದ ಶಿಕ್ಷಣ ವಿರೋಧಿ ಮತ್ತು ವಿದ್ಯಾರ್ಥಿ ವಿರೋಧಿ ನಡೆಯನ್ನು ಎಬಿವಿಪಿ ಖಂಡಿಸುತ್ತದೆ. ಬೆಂಗಳೂರಿನ ಕೆ.ಇ.ಎ ಮತ್ತು ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಬಂಧಿಸಿರುವ ರಾಜ್ಯಸರ್ಕಾರಕ್ಕೆ ನಾಳೆಯದಿನ ಲಕ್ಷಾಂತರ ಜನ ರಸ್ತೆಗಿಳಿದು ಹೋರಾಟ ಮಾಡುತ್ತೇವೆ ತಾಕತ್ತಿದ್ದರೆ ಬಂಧಿಸಿ ಎಂದು ಸವಾಲು ಹಾಕಿದರು.
ತಾಲೂಕು ಸಂಚಾಲಕ್ ಆದಿತ್ಯ ಶೆಟ್ಟಿ ಮಾತನಾಡಿ ಕೆ.ಇ ಎ ಅಧಿಕಾರಿಗಳು ಅತ್ಯಂತ ಬೇಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ, 240 ಪ್ರಶ್ನೆಗಳಲ್ಲಿ 50 ಕ್ಕಿಂತ ಹೆಚ್ಚು ವಿಷಯಾಂತರಿತ ಪ್ರಶ್ನೆಗಳನ್ನು ನೀಡಿರುವುದು ಕೆ.ಇ.ಎ ಅಧಿಕಾರಗಳ ನಿರ್ಲಕ್ಷ ಕಂಡು ಬರುತ್ತದೆ. ಉನ್ನತ ಅಧಿಕಾರಿಗಳು, ಶಿಕ್ಷಣ ತಜ್ಞರು ಎಂದು ಕರೆದುಕೊಳ್ಳುವವರು ಎ.ಸಿ ರೂಂ ನಲ್ಲಿ ಕುಳಿತು ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸುವ ಅತ್ಯಂತ ಮಹತ್ವದ ಸಿ.ಇ.ಟಿ ಪರೀಕ್ಷೇ ಇಂದು ಗೊಂದಲದ ಗೂಡಾಗಿರುವುದು ವಿದ್ಯಾರ್ಥಿಗಳು ಹಾಗು ಪೋಷಕರಲ್ಲಿ ದಿಗ್ಭ್ರಾಂತಿಯನ್ನು ಉಂಟು ಮಾಡುತ್ತದೆ. ಹಾಗಾಗಿ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿಗಳಲ್ಲಿ ಆತಂಕವನ್ನು ದೂರಮಾಡಿ ಭರವಸೆಯನ್ನು ರೂಪಿಸುವ ಕ್ರಮ ಕೈಗೊಳ್ಳಬೇಕೆಂದು ಎ.ಬಿ.ವಿ.ಪಿ ಆಗ್ರಹಿಸುತ್ತದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಮಂಗಳೂರು ಜಿಲ್ಲಾ ಸಂಚಾಲಕ್ ಶ್ರೀಪಾದ್ ತಂತ್ರಿ, ಮಹಾನಗರ ಕಾರ್ಯದರ್ಶಿ ಶ್ರೇಯಸ್ ಇಡ್ಯಡ್ಕ, ಮೋನಿಶ್ ಶೆಟ್ಟಿ, ರಕ್ಷಣ್, ಸಂಜಿತ್, ಕೌಶಿಕ್,ಶಶಾಂಕ್ ಉಪಸ್ಥಿತರಿದ್ದರು.