ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ರಮಣೀಯ ಸ್ಥಳವಾದ ನರಹರಿ ಶ್ರೀ ಸದಾಶಿವ ಕ್ಷೇತ್ರದಲ್ಲಿ ಆಟಿ ಅಮವಾಸ್ಯೆಯ ಪ್ತಯುಕ್ತ ತೀರ್ಥ ಸ್ನಾನ ನಡೆಯಿತು.

ಮುಂಜಾನೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ಬಂದು ತೀರ್ಥ ಸ್ನಾನ ಮಾಡಿ ದೇವರ ಪ್ರಸಾದ ಸ್ವೀಕರಿಸಿದರು. ನರಹರಿ ಪರ್ವತ ಪ್ರಕೃತಿಯ ಮಡಿಲಲ್ಲಿರುವ ರಮಣೀಯ ತಾಣ. ನೋಡಲು ಅತ್ಯಂತ ಸುಂದರ ಮತ್ತು ಪ್ರಕೃತಿಯ ಸೌಂದರ್ಯದಿಂದ ಕೂಡಿರುವ ಬೆಟ್ಟ ಇದು.
ಸುತ್ತಲೂ ಕಾಣಸಿಗುವ ಹಸಿರು ಗಿಡಗಳು. ಆಕಾಶಕ್ಕೆ ಮುತ್ತಿಕ್ಕುವ ಬೆಳ್ಳಿ ಮೋಡಗಳು. ನೀಲಾಕಾಶದ ಮಧ್ಯೆ ಸೂರ್ಯದೇವನ ಆ ಕಿರಣಗಳು ನೇರವಾಗಿ ಬೆಟ್ಟದಲ್ಲಿದ್ದ ಆ ಸದಾಶಿವನ ಗೋಪುರಕ್ಕೆ ಸ್ಪರ್ಶಿಸುವಾಗ ದೃಶ್ಯವನ್ನು ಕಣ್ಣುಂಬಿಕೊಳ್ಳುವುದೇ ಒಂದು ಮಹಾ ಪುಣ್ಯ.
ಪ್ರಕೃತಿಯ ರಮಣೀಯ ಕ್ಷೇತ್ರದಲ್ಲಿ ನೆಲೆ ನಿಂತು ಭಕ್ತರ ಆಸೆಗಳನ್ನು ಈಡೇರಿಸುತ್ತಿದ್ದಾನೆ ನರಹರಿ ಪರ್ವತದಲ್ಲಿರುವ ಸದಾಶಿವ ದೇವರು. ಇಲ್ಲಿಯ ವಿಶೇಷವೆಂದರೆ ಇಲ್ಲಿ ವಿಷ್ಣು ಮತ್ತು ಶಿವ ಜೊತೆಯಾಗಿ ನೆಲೆ ನಿಂತಿದ್ದಾರೆ.
