ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ಕಲ್ಕೂರ ಪ್ರತಿಷ್ಠಾನವು ಕೊಡಮಾಡುವ ‘ಕಾರಂತ ಪ್ರಶಸ್ತಿ’ಯನ್ನು ಮಂಗಳೂರು ಪತ್ತುಮುಡಿ ಸೌಧದಲ್ಲಿ ನಡೆದ ‘ಕೋಟ ಶಿವರಾಮ ಕಾರಂತ ಹುಟ್ಟುಹಬ್ಬ’ ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನಿಸಿ ಮಾತನಾಡಿದ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್.ಧರ್ಮ, ಕೃತಿಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ಪ್ರಶ್ನಿಸುವ ಧೈರ್ಯ ಮಾಡಿದವರು ಕಾರಂತರು. ಪುಸ್ತಕವನ್ನು ಓದುವ ಹವ್ಯಾಸ ಇಂದಿನ ದಿನಗಳಲ್ಲಿ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅವರ ಹುಟ್ಟುಹಬ್ಬದ ಆಚರಣೆಯ ಮೂಲಕ ಮಹತ್ವ ಬದಲಾವಣೆಯೊಂದನ್ನು ತರಬೇಕಾಗಿದೆ. ಕಾರಂತರ ಹುಟ್ಟುಹಬ್ಬವೇ ಪುಸ್ತಕ ಓದುವ ಕ್ರಾಂತಿಗೆ ನಾಂದಿಯಾಗಲಿ ಎಂದರು.
ಜನತಾ ಡಿಲಕ್ಸ್ ಪಾಲುದಾರ ಪತ್ತು ಮುಡಿ ಸೂರ್ಯ ನಾರಾಯಣ ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಡಾ ಹರಿಕೃಷ್ಣ ಪುನರೂರು ಪುಷ್ಪನಮನ ಸಲ್ಲಿಸಿದರು. ಕಂಪ್ಯೂಟರ್ ಭಾಷಾ ವಿಜ್ಞಾನಿ ನಾಡೋಜ ಕೆ.ಪಿ.ರಾವ್ ಕಾರಂತರನ್ನು ಸ್ಮರಿಸಿದರು.
ಶಿಕ್ಷಣ ಸೇವೆಗಾಗಿ ‘ಕಲ್ಕೂರ ಶಿಕ್ಷಣ ಸಿರಿ’ ಪುರಸ್ಕಾರವನ್ನು ಗೀತಾ ಜುಡಿತ್ ಸಲ್ದಾನಾ, ಹೊರನಾಡ ಕನ್ನಡ/ ಸಂಸ್ಕೃತಿ ಸೇವೆಗಾಗಿ ‘ಕಲ್ಕೂರ ಗಮಕ ಸಿರಿ’ ಪ್ರಶಸ್ತಿಯನ್ನು ತೆಕ್ಕೆಕೆರೆ ಶಂಕರ ನಾರಾಯಣ ಭಟ್‌ಗೆ ಪ್ರದಾನ ಮಾಡಲಾಯಿತು.
ಶಾರದಾ ವಿದ್ಯಾಲಯದ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು. ಉಡುಪಿ ಸುಹಾಸಂ ಅಧ್ಯಕ್ಷ ಎಚ್. ಶಾಂತರಾಮ ಐತಾಳ್ ಕಾರ್ಡ್‌ನಲ್ಲಿ ಚಿತ್ರ ಸ್ಪರ್ಧೆಯ ವಿಜೇತರಿತಗೆ ಬಹುಮಾನ ವಿತರಿಸಿದರು. ಮೇಘಾಲಯದ ಸರಸ್ವತಿ ಎಜುಕೇಶನಲ್ ಆ್ಯಂಡ್ ವೆಲ್ಪೇರ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಡಾ. ಪಿ.ಅನಂತ ಕೃಷ್ಣ ಭಟ್, ಭಾರತ ಸೇವಾದಳ ಕೇಂದ್ರ ಸಮಿತಿ ಸದಸ್ಯ ಬಶೀರ್ ಬೈಕಂಪಾಡಿ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಶ್ರೀಶ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ಎಸ್. ಗುರುರಾಜ್ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು. ಪ್ರೊ. ಜಿ.ಕೆ. ಭಟ್ ಸೇರಾಜೆ ಅಭಿನಂದನಾ ನುಡಿಗಳನ್ನಾಡಿದರು. ದಯಾನಂದ ಕಟೀಲ್ ಸನ್ಮಾನ ಪತ್ರ ವಾಚಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.