ಮಂಗಳೂರು(ದಕ್ಷಿಣ ಕನ್ನಡ): ಎಚ್ಚರಿಕೆ. “ಇಲ್ಲಿ ನಾಯಿ ಮರಿಗಳನ್ನು ತಂದು ಬಿಡುವವರು ನಿಮ್ಮ ಹೆಂಡತಿ ಮಕ್ಕಳನ್ನು ಇಲ್ಲಿಯೇ ತಂದು ಬಿಡಿ, ಅವರನ್ನು ಕೂಡ ನಾವು ಚೆನ್ನಾಗಿ ನೋಡಿ ಕೊಳ್ಳುತ್ತೇವೆ.
(ನಾಯಿಗಳನ್ನು ಸಾಕಲು ಯೋಗ್ಯತೆ ಇಲ್ಲದವರು ದಯವಿಟ್ಟು ನಾಯಿಗಳನ್ನು ಸಾಕಬೇಡಿ.),
ನಾಯಿಗೆ ಹಳಸಿದ ಅನ್ನ ಮಣ್ಣಿನಲ್ಲಿ ಹಾಕಿದರೂ ಕೂಡ ತಿಂದು ನಿಯತ್ತಿನಲ್ಲಿರುತ್ತದೆ. ”ಇದು ‘ಎಚ್ಚರಿಕೆ’ ಎಂಬ ತಲೆಬರಹದೊಂದಿಗೆ ರಸ್ತೆ ಬದಿಯಲ್ಲಿ ಹಾಕಲಾಗಿರುವ ಫ್ಲೆಕ್ಸ್ ನಲ್ಲಿರುವ ಆಕ್ರೋಶದ ವಾಕ್ಯಗಳು.
ಇದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮದ ಪಿಜಕ್ಕಳ ಬಸ್ ನಿಲ್ದಾಣದ ಬಳಿ ದೊಂಬದಪಲ್ಕೆ ರಸ್ತೆ ಬದಿಯಲ್ಲಿ ಈ ಫ್ಲೆಕ್ಸ್ ಹಾಕಲಾಗಿದೆ.
ಸುಡು ಬಿಸಿಲಿನ ಬೇಗೆಯಲ್ಲಿ ಬಾಯಾರಿ ಬೀದಿಯಲ್ಲಿ ನೀರಿಗಾಗಿ ತುತ್ತು ಅನ್ನಕ್ಕಾಗಿ ಅಲೆದಾಡಿ ನರಳುತ್ತಿರುವ ಅನಾಥ ನಾಯಿ ಮರಿಗಳನ್ನು ಕಂಡು ಮರುಗಿ ಮನ ನೊಂದವರು ಯಾರೋ ಮುದ್ರಿಸಿ ಈ ಫ್ಲೆಕ್ಸ್ ಹಾಕಿರಬಹುದು. ಈ ಪರಿಸರದಲ್ಲಿ ಈ ಹಿಂದೆ ಪುಟ್ಟ ನಾಯಿ ಮರಿಗಳನ್ನು ತಂದು ಇಲ್ಲಿ ಎಸೆದಿದ್ದರು ಎಂಬ ಮಾಹಿತಿಯೂ ಲಭ್ಯವಾಗುತ್ತಿದೆ. ಇದನ್ನು ನೋಡಿ ಯಾರೋ ಈ ಬ್ಯಾನರ್ ಹಾಕಿರಬಹುದು.