ಅಬ್ದುಲ್ ರಹ್ಮಾನ್ ಕೊಲೆ ಕೃತ್ಯದ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಲ್ಲಿ ಸರಕಾರ ವಿಫಲ: ಎಸ್‌ಡಿಪಿಐ ಬೃಹತ್ ಪ್ರತಿಭಟನೆ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳತ್ತಮಜಲುವಿನಲ್ಲಿ ಅಬ್ದುಲ್ ರಹ್ಮಾನ್‌ರ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ಮತ್ತು ರಾಜ್ಯ ಸರಕಾರದ ವೈಫಲ್ಯ ಖಂಡಿಸಿ ಎಸ್‌ಡಿಪಿಐ ದ.ಕ. ಜಿಲ್ಲಾ ಸಮಿತಿಯು ಮಂಗಳೂರು ಕ್ಲಾಕ್ ಟವರ್ ಬಳಿ ಸಂಜೆ ಪ್ರತಿಭಟನೆ ನಡೆಸಿತು.
ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಮುನೀಶ್ ಅಲಿ ಮಾತನಾಡಿ ರಹ್ಮಾನ್ ಕೊಲೆ ಪ್ರಕರಣದಲ್ಲಿ ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆಯು ನ್ಯಾಯ ದೊರಕಿಸಿಕೊಡುವಲ್ಲಿ ವಿಫಲವಾಗಿದೆ. ನ್ಯಾಯಕ್ಕಾಗಿ ಕೊಲೆಯಾದ ರಹ್ಮಾನ್ ಮತ್ತು ಗಾಯಾಳು ಕಲಂದರ್ ಶಾಫಿ ಕುಟುಂಬಸ್ಥರು ಇನ್ನೂ ಕೂಡ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ರಹ್ಮಾನ್ ಕೊಲೆ ಆರೋಪಿಗಳ ವಿರುದ್ಧ ದಾಖಲಿಸಲಾದ ಕೊಕ ಕಾಯ್ದೆಗೆ ಸಂಬಂಧಿಸಿ ಸರಕಾರಿ ಅಭಿಯೋಜಕರ ತರಾತುರಿಯ ಪ್ರಕ್ರಿಯೆ ಅಚ್ಚರಿ ಹುಟ್ಟಿಸಿದೆ. 90ದಿನಗಳೊಳಗೆ ಕೋರ್ಟ್ ಗೆ ನೀಡಬೀಕಿದ್ದ ತನಿಖಾ ವರದಿ 91ನೇ ದಿನಕ್ಕೆ ನೀಡಿರುವುದರ ಬಗ್ಗೆ ಸಂಶಯವಿದೆ. ನ್ಯಾಯ ಸಿಗೋ ವರೆಗೂ ನಾವು ರಸ್ತೆ, ಕೋರ್ಟ್ ಗಳಲ್ಲಿ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.
ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮಾತನಾಡಿ ಕಾಂಗ್ರೆಸ್ ಪಕ್ಷ ಮತ್ತು ಸರಕಾರ ಮುಸ್ಲಿಮರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಎಡವಿದೆ. ದ.ಕ.ಜಿಲ್ಲೆಯ ವಿದ್ಯಮಾನದ ಬಗ್ಗೆ ಅವಲೋಕಿಸಲು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್‌ರನ್ನು ಕೂಡ ದಾರಿ ತಪ್ಪಿಸಲಾಗಿದೆ ಎಂದರಲ್ಲದೆ, ದಕ್ಷ ಪೊಲೀಸ್ ಅಧಿಕಾರಿ ಎಂದು ಗುರುತಿಸಲ್ಪಟ್ಟ ದ.ಕ.ಜಿಲ್ಲಾ ಎಸ್ಪಿಯ ದಕ್ಷತೆಯು ರಹ್ಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಯಾಕಿಲ್ಲ? ಅವರ ಕರ್ತವ್ಯ ನಿಷ್ಠೆ ಏನಾಯಿತು? ಎಂದು ಪ್ರಶ್ನಿಸಿದರು.
ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮಾತನಾಡಿ ಕೊಲೆಯಾದ ರಹ್ಮಾನ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ. ಜಾನುವಾರು ಸಾಗಾಟ ಪ್ರತಿಬಂಧಕ ಕಾಯ್ದೆಯ ಬಗ್ಗೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ತೋರುವ ಆಸಕ್ತಿಯು ಕೊಳತ್ತಮಜಲಿನ ರಹ್ಮಾನ್ ಕೊಲೆಗೆ ಪ್ರಕರಣಕ್ಕೆ ಇಲ್ಲದಿರುವುದು ವಿಷಾದನೀಯ. ಬಿಜೆಪಿ ಸರ್ಕಾರವಿದ್ದಾಗ ಮುಸ್ಲಿಮ್ ವಿರುದ್ಧವಾಗಿ ಕೆಲವು ಕಾನೂನುಗಳನ್ನು ತರುತ್ತದೆ. ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಅವರಿಗಿಂತ ತೀಕ್ಷ್ಣವಾಗಿ ಮುಸ್ಲಿಮರ ಮೇಲೆ ಉಪಯೋಗಿಸುತ್ತದೆ. ಮನೆಯ ಕೀಲಿ ಕೈ, ಸಚಿವರೊಬ್ಬರು ವೈಯಕ್ತಿಕವಾಗಿ ನೀಡಿದ 50 ಲಕ್ಷ ನ್ಯಾಯಕ್ಕೆ ಪರ್ಯಾಯವಾಗಲು ಸಾಧ್ಯವೇ ಇಲ್ಲ. ನ್ಯಾಯಕ್ಕೆ ಪರ್ಯಾಯ ನ್ಯಾಯವೇ ಹೊರತು ಬೇರೆ ಯಾವುದೂ ಆಗಲು ಸಾಧ್ಯವಿಲ್ಲ ಎಂದರು.
ಪ್ರತಿಭಟನೆಯ ಆರಂಭದಲ್ಲಿ 2019ರ NRC/CAA ಹೋರಾಟದಲ್ಲಿ ಭಾಗಿಯಾಗಿ ಹುತಾತ್ಮರಾಗಿದ್ದ ಜಲೀಲ್ ಮತ್ತು ನೌಶಿನ್ ಗೆ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಿ ಸ್ಮರಿಸಲಾಯಿತು.
ಎಸ್ ಡಿ ಪಿ ಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, ನಗರ ಜಿಲ್ಲಾ ಉಪಾಧ್ಯಕ್ಷ ಅಶ್ರಫ್ ಅಡ್ಡೂರು, ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪುತ್ತೂರು, ಜಿಲ್ಲಾ ಕಾರ್ಯದರ್ಶಿಗಳಾದ ನವಾಝ್ ಷರೀಫ್ ಕಟ್ಟೆ, ಶಾಕಿರ್ ಅಳಕೆಮಜಲು, ನಗರ ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್, ಹನೀಫ್ ಪೂಂಜಾಲ್ ಕಟ್ಟೆ, ಅಕ್ಬರ್ ಬೆಳ್ತಂಗಡಿ, ಶಾಹುಲ್ ಎಸ್ ಎಚ್, ಇಕ್ಬಾಲ್ ಕಣ್ಣೂರು, ಉಸ್ಮಾನ್ ಗುರುಪುರ ಉಪಸ್ಥಿತರಿದ್ದರು. ಎಸ್ಡಿಪಿಐ ಜಿಲ್ಲಾ ಪ್ರದಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಸ್ವಾಗತಿಸಿದರೆ, ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು.



