ಬೆಂಗಳೂರು: ರೈಲ್ವೆ ಪರೀಕ್ಷೆಯಲ್ಲಿ ಮಂಗಳಸೂತ್ರ ಮತ್ತು ಜನಿವಾರ ಧರಿಸಲು ವಿಧಿಸಿದ್ದ ನಿರ್ಬಂಧದ ಆದೇಶವನ್ನು ರೈಲ್ವೆ ಇಲಾಖೆ ಈಗ ವಾಪಸ್ ಪಡೆದಿದೆ. ಈ ನಿರ್ಣಯ ಹಲವಾರು ಸಂಘಟನೆಗಳ ಆಕ್ರೋಶದ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿದೆ.
ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಸೂಚನೆಯ ಮೇರೆಗೆ ಈ ನಿರ್ಬಂಧವನ್ನು ಹಿಂಪಡೆಯಲಾಗಿದೆ. ಅವರು ಟ್ವಿಟ್ಟರ್ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದು, ಏಪ್ರಿಲ್ 28ರಿಂದ 30ರ ತನಕ ನಡೆಯುವ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಜನಿವಾರ ಅಥವಾ ಮಂಗಳಸೂತ್ರ ಧರಿಸಬಹುದೆಂಬಂತೆ ಸೂಚನೆ ನೀಡಲಾಗಿದೆ.
ಸೋಮಣ್ಣ ಅವರು, ಈ ನಿರ್ಬಂಧದ ಬಗ್ಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸೇರಿದಂತೆ ಹಲವು ಸಂಘಟನೆಗಳು, ಶಾಸಕರು, ಸಂಸದರು ತಮ್ಮ ಗಮನ ಸೆಳೆದಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮತ್ತು ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಗೊಂದಲ ನಿವಾರಿಸಲಾಗಿದೆ. ಜನಿವಾರ, ಮಾಂಗಲ್ಯ ಇತ್ಯಾದಿ ಸಂಸ್ಕೃತಿಯನ್ನು ಬಿಂಬಿಸುವ ಯಾವುದೇ ವಸ್ತುವನ್ನು ಧರಿಸಿ ಬಂದಲ್ಲಿ ಅಭ್ಯರ್ಥಿಗಳಿಗೆ ತೊಂದರೆ ನೀಡಬಾರದೆಂದು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ.
ಇತರ ಎಲ್ಲಾ ಪರೀಕ್ಷಾ ನಿಯಮವನ್ನು ಪಾಲಿಸಿ, ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲು ಸೂಚಿಸಲಾಗಿದೆ. ಪರೀಕ್ಷಾ ಅಭ್ಯರ್ಥಿಗಳು ಸಹ ನಿಯಮಾನುಸಾರ ಪರೀಕ್ಷೆ ಬರೆಯುವಂತೆ ಮನವಿ ಮಾಡುತ್ತೇನೆ. ಅಭ್ಯರ್ಥಿಗಳು ಗೊಂದಲಕ್ಕೀಡಾಗಬಾರದೆಂದು ಮನವಿ ಮಾಡಿದ್ದಾರೆ.