Friday, April 11, 2025
Google search engine

Homeಅಪರಾಧಮಂಗಳೂರು: ರಾಮಸೇನೆಯ ಸ್ಥಾಪಕ ಅಧ್ಯಕ್ಷ ಪ್ರಸಾದ್‌ ಅತ್ತಾವರ , ಟಿವಿ ಚಾನೆಲ್‌ನ ಕ್ಯಾಮರಾಮ್ಯಾನ್ ಶರಣ್ ರಾಜ್...

ಮಂಗಳೂರು: ರಾಮಸೇನೆಯ ಸ್ಥಾಪಕ ಅಧ್ಯಕ್ಷ ಪ್ರಸಾದ್‌ ಅತ್ತಾವರ , ಟಿವಿ ಚಾನೆಲ್‌ನ ಕ್ಯಾಮರಾಮ್ಯಾನ್ ಶರಣ್ ರಾಜ್ ಸಹಿತ 14 ಮಂದಿ ಬಂಧನ

ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ನಗರದ ಬಿಜೈ ಕೆಎಸ್ಸಾರ್ಟಿಸಿ ಬಳಿಯ ಯುನಿಸೆಕ್ಸ್ ಸೆಲೂನ್‌ಗೆ ರಾಮಸೇನೆಯ ಕಾರ್ಯಕರ್ತರು ನುಗ್ಗಿ ದಾಂಧಲೆಗೈದ ಘಟನೆ ನಡೆದಿದೆ. ದಾಂಧಲೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಲೇ ಎಚ್ಚೆತ್ತುಕೊಂಡ ಪೊಲೀಸರು ರಾಮಸೇನೆಯ ಸ್ಥಾಪಕ ಅಧ್ಯಕ್ಷ ಪ್ರಸಾದ್‌ ಅತ್ತಾವರ ಹಾಗೂ ಟಿವಿ ಚಾನೆಲ್‌ನ ಕ್ಯಾಮರಾಮ್ಯಾನ್ ಶರಣ್ ರಾಜ್ ಸಹಿತ 14 ಮಂದಿಯನ್ನು ಸಂಜೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಇತರ ಆರೋಪಿಗಳನ್ನು ಫರಂಗಿಪೇಟೆಯ ಹರ್ಷರಾಜ್ ಯಾನೆ ಹರ್ಷಿತ್, ಮೂಡುಶೆಡ್ಡೆಯ ಮೋಹನದಾಸ್ ಯಾನೆ ರವಿ, ಉಪ್ಪಳದ ಪುರಂದರ, ವಾಮಂಜೂರು ಅಂಬೇಡ್ಕರ್ ನಗರದ ಸಚಿನ್, ಉಳಾಯಿಬೆಟ್ಟುವಿನ ರವೀಶ್, ಬೆಂಜನಪದವು ಶಿವಾಜಿನಗರದ ಸುಖೇತ್, ವಾಮಂಜೂರಿನ ಅಂಕಿತ್, ಮೂಡುಶೆಡ್ಡೆ ಶಿವಾಜಿನಗರದ ಕಾಲಿಮುತ್ತು, ಬೊಂಡಂತಿಲ ತಾರಿಗುಡ್ಡೆಯ ಅಭಿಲಾಶ್, ಮೂಡುಶೆಡ್ಡೆ ಶಿವಾಜಿನಗರದ ದೀಪಕ್, ಸರಿಪಳ್ಳದ ವಿಶ್ಲೇಶ್, ಮೂಡುಶೆಡ್ಡೆಯ ಶಿವಾಜಿನಗರದ ಪ್ರದೀಪ್ ಪೂಜಾರಿ ಎಂದು ಗುರುತಿಸಲಾಗಿದೆ.

ಈ ಆರೋಪಿಗಳ ವಿರುದ್ಧ ಬರ್ಕೆ ಠಾಣೆಯಲ್ಲಿ ಸೆ.329 (2), 324 (5), 74, 351 (3), 115 (2), 109, 352, 190 28 ಅಡಿ ಕೇಸ್ ದಾಖಲಾಗಿದೆ. ಮಂಗಳೂರು ನಗರದ ಬಿಜೈ ಕೆಎಸ್ಸಾರ್ಟಿಸಿ ಬಳಿಯ ಆದಿತ್ಯ ಕಾಂಪ್ಲೆಕ್ಸ್‌ನ ಮೂರನೇ ಮಹಡಿಯಲ್ಲಿ ಕಲರ್ಸ್ ಯುನಿಸೆಕ್ಸ್ ಸೆಲೂನ್ ಕಾರ್ಯಾಚರಿಸುತ್ತಿದೆ. ಈ ಸೆಲೂನ್‌ಗೆ ಗುರುವಾರ ರಾಮಸೇನೆಯ ಕಾರ್ಯಕರ್ತರು ಎನ್ನಲಾದ ದುಷ್ಕರ್ಮಿಗಳು ಏಕಾಏಕಿ ನುಗ್ಗಿ ಅವಾಚ್ಯ ಶಬ್ದದಿಂದ ಬೈದು, ಸೆಲೂನ್‌ನಲ್ಲಿದ್ದ ಸಿಬ್ಬಂದಿಗಳಿಗೆ ಹಲ್ಲೆಗೈದು ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸೆಲೂನ್‌ನಲ್ಲಿದ್ದ ಪೀಠೋಪಕರಣಗಳು, ಟೆಲಿಫೋನ್, ಲಾಫಿಂಗ್ ಬುದ್ಧ ಕನ್ನಡಿ, ಬಾಗಿಲು ಸಹಿತ ಸಾಮಗ್ರಿಗಳಿಗೆ ಹಾನಿಗೈದಿದ್ದಾರೆ ಎಂದು ದೂರಲಾಗಿದೆ. ಈ ದುಷ್ಕರ್ಮಿಗಳು ಮಹಿಳಾ ಸಿಬ್ಬಂದಿಗೂ ಬೈದು ಬೆದರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಮಧ್ಯೆ ಸೆಲೂನ್‌ಗೆ ನುಗ್ಗಿದ ರಾಮ ಸೇನೆ ಕಾರ್ಯಕರ್ತರು ಕಾಂಡೋಮ್‌ಗಳನ್ನು ತಂದು ಬೆಡ್ ಮೇಲೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಸೆಲೂನ್‌ನಲ್ಲಿ ದಾಂಧಲೆ ನಡೆಸಿರುವುದು ರಾಮಸೇನೆಯ ಕಾರ್ಯಕರ್ತರು ಎಂದು ಪ್ರಸಾದ್ ಅತ್ತಾವರನು ಕುಡುಪುವಿನಲ್ಲಿರುವ ತನ್ನ ಮನೆಯಲ್ಲಿ ಸುದ್ದಿಗಾರರೊಂದಿಗೆ ಹೇಳಿಕೊಳ್ಳುತ್ತಿರುವಾಗಲೇ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಯ ವಿರುದ್ಧ 2009ರಲ್ಲಿ ಮಂಗಳೂರಿನಲ್ಲಿ ನಡೆದ ಪಬ್ ದಾಂಧಲೆ ಪ್ರಕರಣ, 2015ರ ಸೆ.3ರಂದು ಸಾಹಿತಿ ಎಂ.ಎಂ. ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಫೇಸ್‌ಬುಕ್ ಕಮೆಂಟ್ ಹಾಕಿದ ಆರೋಪ, ಮಂಗಳೂರು ವಿವಿ ಕುಲಪತಿ ಹುದ್ದೆ ಕೊಡಿಸುವುದಾಗಿ ನಂಬಿಸಿ 17.50 ಲಕ್ಷ ರೂ. ಪಡೆದು ವಂಚನೆಗೈದ ಆರೋಪವೂ ಇತ್ತು. ಈ ಎಲ್ಲಾ ಪ್ರಕರಣದಲ್ಲಿ ಪೊಲೀಸರು ಈತನನ್ನು ಬಂಧಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಲ್ ಟಿವಿ ಚಾನೆಲ್‌ನ ಕ್ಯಾಮರಾಮ್ಯಾನ್ ಶರಣ್ ರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ರಾಮಸೇನಾ ಸ್ಥಾಪಕ ಪ್ರಸಾದ್‌ ಅತ್ತಾವರನನ್ನು ಬಂಧಿಸಿದ ಬೆನ್ನಿಗೆ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಶರಣ್‌ ರಾಜ್‌ನನ್ನೂ ತಕ್ಷಣ ಬಂಧಿಸಿದ್ದಾರೆ. ಸೆಲೂನ್‌ಗೆ ನುಗ್ಗಿ ದಾಂಧಲೆ ನಡೆಸುವಾಗ ಶರಣ್ ರಾಜ್ ಕೂಡ ಅವರೊಂದಿಗೆ ತೆರಳಿ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ ಎಂದು ಆರೋಪಿಸಲಾಗಿದೆ. ರಾಮಸೇನೆಯ ಕಾರ್ಯಕರ್ತರ ದಾಂಧಲೆಯ ಬಗ್ಗೆ ಪೂರ್ಣ ಮಾಹಿತಿ ಇದ್ದರೂ ಕೂಡ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿಲ್ಲ ಎಂಬ ಆರೋಪವು ಶರಣ್‌ರಾಜ್‌ನ ವಿರುದ್ಧ ಕೇಳಿ ಬಂದಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ 2009ರ ಮಂಗಳೂರು ಪಬ್ ದಾಂಧಲೆ ಪ್ರಕರಣದ ಸಂದರ್ಭವೂ ದಾಂಧಲೆಕೋರರ ಜೊತೆ ತೆರಳಿ ಶರಣ್ ರಾಜ್ ವಿಡಿಯೋ ಮಾಡಿದ್ದನೆಂಬ ಆರೋಪದ ಮೇರೆಗೆ ಪೊಲೀಸರು ಬಂಧಿಸಿ ಕಾನೂನು ಕ್ರಮವನ್ನು ತೆಗೆದುಕೊಂಡಿದ್ದರು.

RELATED ARTICLES
- Advertisment -
Google search engine

Most Popular