ಮಂಗಳೂರು (ದಕ್ಷಿಣ ಕನ್ನಡ): ಅಂಕಪಟ್ಟಿಯ ಸಮಸ್ಯೆ , ಅವೈಜ್ಞಾನಿಕವಾಗಿ ಕಾಲೇಜಿಗೆ ಶುಲ್ಕಗಳ ಹೆಚ್ಚಳ, ಅವೈಜ್ಞಾನಿಕವಾಗಿ ಪರೀಕ್ಷಾ ಶುಲ್ಕ ಹೆಚ್ಚಳ ಹಾಗೂ ವಿವಿಯ ಹಲವಾರು ಸಮಸ್ಯೆಗಳ ವಿರುದ್ಧ ಎಬಿವಿಪಿ ಮಂಗಳೂರು ವಿಭಾಗದ ವತಿಯಿಂದ ವಿದ್ಯಾರ್ಥಿಗಳು ಇಂದು ಮಂಗಳೂರು ವಿವಿಯ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರದಂದು ಬೆಳಿಗ್ಗೆಯೇ ವಿವಿಯ ಕ್ಯಾಂಪಸ್ ನಲ್ಲಿ ಸೇರಿದ್ದ ಎಬಿವಿಪಿ ನೇತೃತ್ವದಲ್ಲಿ ಜಮಾಯಿಸಿದ್ದ ವಿದ್ಯಾರ್ಥಿಗಳು ಬಳಿಕ ವಿಶ್ವವಿದ್ಯಾಲಯದ ಆಡಳಿತ ಸೌಧದ ಕಡೆಗೆ ಸಾಗಿ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾ ಕಾರರನ್ನು ತಡೆಯಲು ಬ್ಯಾರಿಕೇಡ್ ಹಾಕಿದ್ದು, ಇದನ್ನು ಕೆಳಹಾಕಿ ಮುನ್ನುಗಿದ್ದರು. ಬಳಿಕ ಪೊಲೀಸರು ಆಡಳಿತ ಸೌಧದ ಗಾಜಿನ ಬಾಗಿಲನ್ನು ಹಾಕಿದ್ದು ವಿದ್ಯಾರ್ಥಿಗಳು ತಳ್ಳಾಟ ನಡೆಸಿದಾಗ ಗಾಜು ಪುಡಿಪುಡಿಯಾಗಿ ಓರ್ವ ಪೋಲೀಸ್ ಹಾಗೂ ವಿದ್ಯಾರ್ಥಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
