ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ಕೆಥೋಲಿಕ್ ಸಭಾ ಅಧ್ಯಕ್ಷ ಅಲ್ವಿನ್ ಜೆರೋಮ್ ಡಿಸೋಜಾರಿಗೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಇಂದು ಬಂಧಿಸಿದ್ದಾರೆ.
‘ಬಂಟ್ವಾಳ ತಾಲ್ಲೂಕಿನ ಫರಂಗಿ ಪೇಟೆ ಬಳಿಯ ಪುದು ಗ್ರಾಮದ ಕೋಡಿಮಜಲು ಹೌಸ್ ನಿವಾಸಿ ಮೊಹಮ್ಮದ್ ಅತಾವುಲ್ಲಾ (40 ವರ್ಷ) ಹಾಗೂ ಮಾರ್ನಮಿಕಟ್ಟೆಯ ಕುಡ್ಪಾಡಿ ರಸ್ತೆ ಬಳಿಯ ನಿವಾಸಿ ತೌಸೀರ್ ಅಲಿಯಾಸ್ ಪತ್ತೊಂಜಿ ತೌಸಿರ್ (31 ವರ್ಷ) ಬಂಧಿತರು’ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೇತ್ರಾವತಿ ನದಿಯಲ್ಲಿ ಪಾವೂರು ಉಳಿಯ ದ್ವೀಪದ ಬಳಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿ ಕಥೋಲಿಕ್ ಸಭಾ ನೇತೃತ್ವದಲ್ಲಿ ಸೆ. 29ರಂದು ಪ್ರತಿಭಟನೆ ನಡೆದಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅಲ್ವಿನ್ ಅವರು ಸ್ಥಳಕ್ಕೆ ಮಾಧ್ಯಮದವರನ್ನು ಅ.5ರಂದು ಕರೆದೊಯ್ದಿದ್ದರು. ಅಡ್ಯಾರ್ ಸೇತುವೆ ಬಳಿ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಅಲ್ವಿನ್ ದೂರು ನೀಡಿದ್ದರು.
‘ಆರೋಪಿ ಅತಾವುಲ್ಲಾ, ಅಲ್ವಿನ್ ಅವರಿಗೆ ಅವಾಚ್ಯವಾಗಿ ಬೈದು ಹಲ್ಲೆಗೆ ಪ್ರಚೋದನೆ ನೀಡಿದ್ದ. ಆರೋಪಿ ತೌಸಿರ್ ಅವಾಚ್ಯವಾಗಿ ಬೈದು ಹಲ್ಲೆ ಮಾಡಿದ್ದ. ಆರೋಪಿಗಳ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 352 (ಉದ್ದೇಶಪೂರ್ವಕವಾಗಿ ಅವಮಾನಿಸಿ, ಸಾರ್ವಜನಿಕ ಶಾಂತಿ ಭಂಗವನ್ನುಂಟುಮಾಡುವುದು), ಸೆಕ್ಷನ್ 115(2) (ಸ್ವಯಂಪ್ರೇರಿತವಾಗಿ ಇನ್ನೊಬ್ಬ ವ್ಯಕ್ತಿಗೆ ಹಲ್ಲೆ ನಡೆಸುವುದು), ಸೆಕ್ಷನ್ 351(2) (ಕ್ರಿಮಿನಲ್ ಬೆದರಿಕೆ), ಸೆಕ್ಷನ್ 109 (ಕೊಲೆಯತ್ನ) ಜೊತೆಗೆ ಸೆಕ್ಷನ್ 3(5) (ಗುಂಪು ಸೇರಿ ಹಲ್ಲೆ ನಡೆಸುವುದು) ಅಡಿ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.