ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ಜೈಲ್ ನ ಜಾಮರ್ ಸಮಸ್ಯೆಯನ್ನು ಖಂಡಿಸಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ, ನಗರದ ಜೈಲು ಮುಂಭಾಗ ರಾಸ್ತಾ ರೋಕೋ ಪ್ರತಿಭಟನೆ ನಡೆಯಿತು.

ಈ ವೇಳೆ ಆಕ್ರೋಶದಿಂದ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಒಂದೋ ಜಾಮರ್ ಸಮಸ್ಯೆ ಸರಿಪಡಿಸಿ. ಅಥವಾ ಅದನ್ನು ಕಿತ್ತೊಗೆಯಿರಿ, ಇಲ್ಲವೇ ನಾವೇ ತೆಗೆದು ಬಿಸಾಕುತ್ತೇವೆ ಎಂದು, ಜೈಲು ಅಧಿಕಾರಿಗಳಿಂದ ಹಿಡಿದು ಕಮಿಷನರ್, ಜಿಲ್ಲಾಧಿಕಾರಿ, ಕೊನೆಗೆ ಗೃಹ ಸಚಿವರಿಗೂ ಹೇಳಿ ಆಗಿದೆ. ಕಾಂಗ್ರೆಸ್ಸಿನ ಪರಿಷತ್ ಸದಸ್ಯರೊಬ್ಬರಂತೂ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಪತ್ರಿಕಾ ಹೇಳಿಕೆ ಕೊಟ್ಟರೂ ಸಮಸ್ಯೆ ಮಾತ್ರ ಹಾಗೆಯೇ ಇದ್ದು ಕಾಂಗ್ರೆಸ್ ಆಡಳಿತದಲ್ಲಿ ಸಾರ್ವಜನಿಕರು ಬೀದಿಗಿಳಿದರೆ ಮಾತ್ರ ಸ್ಪಂದನೆ ಸಿಗುತ್ತಿದೆ. ಜೈಲು ಅಧಿಕಾರಿಗಳು ಸರಿಯಾಗಿದ್ದರೆ ಜಾಮರ್ ಅವಶ್ಯಕತೆಯೇ ಬರುವುದಿಲ್ಲ. ವಿಪರ್ಯಾಸವೆಂದರೆ ಈಗಲೂ ಜೈಲಿನೊಳಗೆ ಮೊಬೈಲ್ ನೆಟ್ವರ್ಕ್ ಸಿಗುತ್ತಿದೆ. ಹೊರಗಿರುವ ಜನರಿಗೇ ಸಿಗುತ್ತಿಲ್ಲ. ಇವರ ಬೇಜವಾಬ್ದಾರಿಯಿಂದಾಗಿ ಇತ್ತೀಚೆಗೆ ರೋಗಿಯೊಬ್ಬರು ತುರ್ತುಚಿಕಿತ್ಸೆ ಸಿಗದೇ ಮೃತಪಟ್ಟ ಘಟನೆ ನಡೆದಿದೆ. ಈ ಸಾವಿನ ಹೊಣೆ ಯಾರು ಹೊರುತ್ತಾರೆ? ಜೈಲು ಅಧಿಕಾರಿಗಳೇ? ಉಸ್ತುವಾರಿ ಸಚಿವರೇ? ಅಥವಾ ಮುಖ್ಯಮಂತ್ರಿಗಳೇ? ಎಂದು ಪ್ರಶ್ನಿಸಿದರು.
ಆಕ್ರೋಶಿತ ಬಿಜೆಪಿ ಕಾರ್ಯಕರ್ತರು, ಜೈಲಿಗೆ ಹಾಕಲಾಗಿದ್ದ ಬ್ಯಾರಿಕೇಡ್ ನತ್ತ ನುಗ್ಗಿದಾಗ ಪೊಲೀಸರು ತಡೆಯಲು ಯತ್ನಿಸಿದರು. ಈ ವೇಳೆ ನಡೆದ ತಳ್ಳಾಟದಲ್ಲಿ ಕಂಬ್ಳ ವಾರ್ಡಿನ ಬಿಜೆಪಿ ನಿಕಟಪೂರ್ವ ಪಾಲಿಕೆ ಸದಸ್ಯೆ ಲೀಲಾವತಿ ಪ್ರಕಾಶ್ ರವರು ಅಸ್ವಸ್ಥಗೊಂಡು ಕೆಎಂಸಿ ಜ್ಯೋತಿ ಆಸ್ಪತ್ರೆಗೆ ದಾಖಲಾದರು.
ಪ್ರತಿಭಟನೆಯಲ್ಲಿ ರಮೇಶ್ ಕಂಡೆಟ್ಟು, ರವಿಶಂಕರ್ ಮಿಜಾರು, ಪೂರ್ಣಿಮಾ, ಪ್ರೇಮಾನಂದ ಶೆಟ್ಟಿ, ದಿವಾಕರ ಪಾಂಡೇಶ್ವರ, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಸುಧೀರ್ ಶೆಟ್ಟಿ ಕಣ್ಣೂರು, ಕಿಶೋರ್ ಕೊಟ್ಟಾರಿ, ಭಾನುಮತಿ, ಮನೋಹರ್ ಕದ್ರಿ, ಶಕೀಲಾ ಖಾವ, ಅಶ್ವಿತ್ ಕೊಟ್ಟಾರಿ ಸಹಿತ ಅನೇಕ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.