ಮಂಗಳೂರು (ದಕ್ಷಿಣ ಕನ್ನಡ): ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ನೇತೃತ್ವದಲ್ಲಿ ಪತ್ರಕರ್ತರ ಜೊತೆಗೆ ದೀಪಾವಳಿ ಸ್ನೇಹಮಿಲನ ಕಾರ್ಯಕ್ರಮವು ಮಂಗಳೂರು ನಗರದ ಖಾಸಗಿ ಹೊಟೇಲ್ ಹಾಲ್‌ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾಧ್ಯಮ ಮಿತ್ರರನ್ನು ಉದ್ದೇಶಿಸಿ ಮಾತಾಡಿದ ಎಂಎಲ್ ಸಿ ಭಂಡಾರಿ, “ಪತ್ರಕರ್ತರು ವರ್ಷದ 365 ದಿನಗಳ ಕಾಲ ಸಾಮಾಜಿಕ ಚಿಂತನೆ ಮತ್ತು ಕಾಳಜಿಯೊಂದಿಗೆ ತಮ್ಮ ಕಾರ್ಯದಲ್ಲಿ ಬ್ಯುಸಿ ಆಗಿದ್ದು ಅವರನ್ನು ಒಂದೆಡೆ ಸೇರಿಸಿ ಹಬ್ಬದ ಸಂಭ್ರಮ ಆಚರಿಸಲು ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಪತ್ರಕರ್ತರು ಮತ್ತವರ ಕುಟುಂಬ ವರ್ಗಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು” ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಪತ್ರಕರ್ತರಾದ ರಾಜೇಶ್ ರಾವ್, ಪುಷ್ಪರಾಜ್ ಶೆಟ್ಟಿ ಬಿ.ಎನ್. ಅವರನ್ನು ಸನ್ಮಾನಿಸಲಾಯಿತು. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ, ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಭಾಸ್ಕರ್ ರೈ ಕಟ್ಟ ಉಪಸ್ಥಿತರಿದ್ದರು.