ಮಂಗಳೂರು (ದಕ್ಷಿಣ ಕನ್ನಡ); ಮಂಗಳೂರಿನ ಡಿಸಿ ಕಚೇರಿ ಆವರಣದಲ್ಲಿರುವ ನೂರಾರು ವರ್ಷಗಳ ಇತಿಹಾಸವುಳ್ಳ ಹಳೆ ಡಿಸಿ ಕಚೇರಿ ಕಟ್ಟಡದಲ್ಲಿ ಇಂದು ಮತ್ತು ನಾಳೆ ಪಾರಂಪರಿಕ ಸಪ್ತಾಹ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಇಂದು ಬೆಳಿಗ್ಗೆ 10 ಗಂಟೆಯಿಂದ ಕಾರ್ಯಕ್ರಮ ಆರಂಭವಾಯಿತು.
ಸರಿ ಸುಮಾರು ಒಂದೂವರೆ ಶತಮಾನದ ಇತಿಹಾಸವುಳ್ಳ ಮಂಗಳೂರು ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿಯ ಕಟ್ಟಡದ ಆವರಣದಲ್ಲಿ ನವೆಂಬರ್ 30 ಹಾಗೂ ಡಿಸೆಂಬರ್ 1 ರಂದು ಪಾರಂಪರಿಕ ಸಪ್ತಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬ್ರಿಟೀಷರ ಕಾಲದಲ್ಲಿ ಕಲೆಕ್ಟರ್ ಆಫೀಸ್ ಎಂದೇ ಕರೆಯಲ್ಪಡುತ್ತಿದ್ದ ಈ ಕಟ್ಟಡವು ಒಂದು ಕಾಲದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ಹಿಂದಿನ ಕೆನರಾ ಜಿಲ್ಲೆಯ ಆಡಳಿತ ಕೇಂದ್ರಸ್ಥಾನವಾಗಿತ್ತು. ಸ್ವಾತಂತ್ರ್ಯಾಪೂರ್ವದಲ್ಲಿ ಬ್ರಿಟೀಷ್ ಅಧಿಕಾರಿಗಳಿಗೆ ಇದು ಕಚೇರಿಯಾಗಿತ್ತು. ನಂತರವೂ ಜಿಲ್ಲಾಧಿಕಾರಿ ಕಚೇರಿ ಇಲ್ಲಿಯೇ ಕಾರ್ಯಾಚರಿಸುತ್ತಿತ್ತು.
1914 ರಿಂದ 1919 ರ ವರೆಗೆ ನಡೆದ ಒಂದನೇ ಮಹಾ ಯುದ್ದದಲ್ಲಿ ಇದೇ ಹಳ್ಳಿಯಿಂದ 88 ಮಂದಿ ಪಾಲ್ಗೊಂಡಿದ್ದು ಅವರಲ್ಲಿ ಇಬ್ಬರು ಹುತಾತ್ಮರಾಗಿದ್ದರು. ಅವರ ಗೌರವಾರ್ಥ ಬರೆದ ಲೇಖನ ಇ0ದಿಗೂ ಈ ಕಟ್ಟಡದ ಗೋಡೆಯ ಮೇಲೆ ಕಾಣಬಹುದು. ಬಳಿಕ ಪಕ್ಕದಲ್ಲಿಯೇ ಹೊಸ ಕಟ್ಟಡವಾದ ಬಳಿಕ ಜಿಲ್ಲಾಧಿಕಾರಿ ಕಚೇರಿ ಅಲ್ಲಿಗೆ ಸ್ಥಳಾಂತರಗೊಂಡಿದ್ದರೂ, ಹಳೇ ಕಟ್ಟಡವನ್ನು ಹಾಗೆಯೇ ಉಳಿಸಿಕೊಂಡು ಬರಲಾಗಿದೆ. ಇಂದಿಗೂ ಗಟ್ಟಿಮುಟ್ಟಾಗಿ ಸುಭದ್ರ ಸ್ಥಿತಿಯಲ್ಲಿರುವ ಈ ಕಟ್ಟಡವು ಜಿಲ್ಲೆಯ ಆಡಳಿತ ಕ್ಷೇತ್ರದ ಭವ್ಯ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿದೆ.
ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ