ಮಂಗಳೂರು (ದಕ್ಷಿಣ ಕನ್ನಡ): ತಿರುಪತಿ ಲಡ್ಡುವಿನಲ್ಲಿ ಅಪವಿತ್ರ ಮಾಡಿ ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆಯಾಗಲು ಕಾರಣವಾಗಿರುವವರನ್ನು ಸಿಬಿಐ ತನಿಖೆ ಮೂಲಕ ಗುರಿತಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಇಂದು ಮಂಗಳೂರಿನಲ್ಲಿ ನಡೆದ ಧರ್ಮಾಗ್ರಹ ಸಭೆಯಲ್ಲಿ ನಿರ್ಣಯಕೈಗೊಳ್ಳಲಾಗಿದೆ.

ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನ, ಡೊಂಗರಕೇರಿಯಲ್ಲಿ ಸಾಧು ಸಂತರು, ದೇವಸ್ಥಾನದ ಪ್ರಮುಖರು, ಹಿಂದೂ ಬಾಂಧವರ ಸಮ್ಮುಖದಲ್ಲಿ ನಡೆದ ಧರ್ಮಾಗ್ರಹ ಸಭೆಯಲ್ಲಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಯ್ತು. ಪ್ರಪಂಚದಾದ್ಯಂತ ಇರುವ ಹಿಂದುಗಳ ಶ್ರದ್ಧಾ ಕೇಂದ್ರವಾದ ತಿರುಪತಿ ವೆಂಕಟರಮಣ ದೇವರಿಗೆ ದನದ ಕೊಬ್ಬು, ಮೀನಿನ ಎಣ್ಣೆಯಿಂದ ಕೂಡಿದ ತುಪ್ಪದಿಂದ ತಯಾರಿಸಿದ ಲಡ್ಡುಗಳನ್ನು ಅರ್ಪಿಸಿದ್ದನ್ನು ಈ ಸಭೆಯು ಖಂಡಿಸುತ್ತದೆ.

ಭಗವಂತನಿಗೆ ಈ ತರಹದಲ್ಲಿ ಅಪವಿತ್ರ ನೈವೇದ ತಯಾರಿಸಲು ಯಾರೆಲ್ಲಾ ಕಾರಣರಾಗಿದ್ದಾರೋ, ಕರ್ತವ್ಯ ಲೋಕವನ್ನು ಎಸಗಿದ್ದಾರೋ, ಇಡೀ ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆಯಾಗಲು ಕಾರಣರಾಗಿದ್ದಾರೋ ಅಂತಹವರನ್ನು ಸಿಬಿಐ ತನಿಖೆಯ ಮೂಲಕ ಗುರುತಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಎಂದು ಆಂಧ್ರಪ್ರದೇಶದ ಇಂದಿನ ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ರವರನ್ನು ಈ ಸಭೆಯು ಒತ್ತಾಯಿಸಿದೆ. ಈ ಸಭೆಯಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ಸ್ವಾಮೀಜಿಗಳು, ಸಂತರು ಉಪಸ್ಥಿತರಿದ್ದರು.