ಮಂಗಳೂರು: ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದ ನನ್ನ ಮಗಳನ್ನು ಹುಡುಕಿಕೊಡಿ ಎಂದು ದೂರು ನೀಡಿದ್ದ ಸುಜಾತಾ ಭಟ್ ತಮ್ಮ ಮಗಳು ಅನನ್ಯಾ ಭಟ್ ಅವರ ಫೋಟೋವನ್ನು ಇತ್ತೀಚೆಗೆ ರಿವೀಲ್ ಮಾಡಿದ್ದರು. ಇದೀಗ ಕೇಸ್‌ಗೆ ಸಂಬಂಧಪಟ್ಟಂತೆ ಸ್ಫೋಟಕ ಟ್ವಿಸ್ಟ್ ಒಂದು ಸಿಕ್ಕಿದೆ.
ಸುಜಾತಾ ಭಟ್ ಅವರು ತನ್ನ ಮಗಳ ಫೋಟೋವನ್ನು ರಿವೀಲ್ ಮಾಡಿ 2003 ರಲ್ಲಿ ನಾಪತ್ತೆಯಾಗಿದ್ದ ನನ್ನ ಮಗಳನ್ನು ಈಗಲಾದರೂ ಹುಡುಕಿಕೊಂಡಿ ಎಂದು ಇತ್ತೀಚೆಗಷ್ಟೇ ಕೇಳಿಕೊಂಡಿದ್ದರು. ಆದರೆ ಆ ಫೋಟೋವಿನ ಅಸಲಿಯತ್ತು ಈಗ ಬಹಿರಂಗವಾಗಿದೆ. ಸುಜಾತಾ ಭಟ್ ಅವರು ರಿವೀಲ್ ಮಾಡಿದ ಮಹಿಳೆಯ ಫೋಟೋ ಬೇರೆ ಯಾರದ್ದೋ ಎಂದು ಹೇಳಲಾಗುತ್ತಿದೆ. ಫೋಟೋದಲ್ಲಿರುವುದು ಸುಜಾತಾ ಅಲ್ಲ, ವಸಂತಾ ಎನ್ನಲಾಗುತ್ತಿದೆ.
ಸುಜಾತಾ ಭಟ್ ತನ್ನ ಮಗಳು ಎಂದು ತೋರಿಸುತ್ತಿರುವ ಫೋಟೋ ರಿವೀಲ್ ಮಾಡುವುದಕ್ಕೂ ಮೊದಲು, ಆಕೆಗೆ ಯಾವ ಮಗಳೂ ಇಲ್ಲ ಎಂದು ವಾದಿಸಲಾಗಿತ್ತು. ಆಕೆ ನೀಡಿರುವ ದೂರುಗಳೆಲ್ಲವೂ ಸುಳ್ಳು ಎನ್ನಲಾಗಿತ್ತು. ತನ್ನ ಮಗಳು ಮೊದಲ ವರ್ಷದ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದಳು ಎಂದು ಹೇಳಿದ್ದ ಆಕೆಯ ಸುಳ್ಳುಗಳು ಕಾಲೇಜಿನ ದಾಖಲೆಯಲ್ಲೂ ಬಹಿರಂಗವಾಗಿತ್ತು. ಆದರೆ ನಂತರ ಆಕೆ ರಿವೀಲ್ ಮಾಡಿದ ಫೋಟೋ ಹೊಸ ಕಥೆಯನ್ನು ಬಿಚ್ಚಿಟ್ಟಿದೆ.
ಸುಜಾತಾ 2006 ರಿಂದ 2015ರವರೆಗೆ ಎಲ್ಲಿದ್ದರು ಎಂಬುವುದೇ ಎಲ್ಲರಿಗೂ ಕುತೂಹಲ ಹುಟ್ಟಿಸಿದೆ. ಈಗ ಆಕೆ ಏಕಾಏಕಿ ಬಂದು ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದಾರೆ. 2006ರಲ್ಲಿ ಸುಜಾತ ಭಟ್ ಬೆಂಗಳೂರಿಗೆ ಬಂದು ಜೀವನಕ್ಕಾಗಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಅದೇ ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಿದ್ದ ರಂಗಪ್ರಸಾದ್ ಎನ್ನುವವರು ಈಕೆಗೆ ಪರಿಚಯವಾಗಿದ್ದರು.
ರಂಗಪ್ರಸಾದ್ ಅವರ ಪತ್ನಿ ತೀರಿ ಹೋಗಿದ್ದ ಕಾರಣ ಸುಜಾತಾ ಅವರೊಂದಿಗೆ ಸಂಬಂಧ ಬೆಳೆದಿತ್ತು. ಇಬ್ಬರೂ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದರು. ರಂಗಪ್ರಸಾದ್‌ಗೆ ಶ್ರೀವತ್ಸ ಹೆಸರಿನ ಮಗ ಹಾಗೂ ಒಬ್ಬ ಮಗಳು ಇದ್ದರು. ಮಗಳು ಮದುವೆಯಾಗಿ ಗಂಡನ ಮನೆಗೆ ಹೋದರೆ, ಮಗ ಶ್ರೀವತ್ಸ ಕೊಡಗು ಮೂಲದ ವಾಸಂತಾ ಎನ್ನುವ ಯುವತಿಯನ್ನು ಮದುವೆಯಾಗಿದ್ದ.
ಶ್ರೀವತ್ಸ ಅವರ ಪತ್ನಿ ವಾಸಂತಿ ರಾಮಯ್ಯ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ವಿವಾಹವಾಗಿ ಹಲವು ವರ್ಷ ಕಳೆದರೂ ಇಬ್ಬರ ನಡುವೆ ಸಮರಸ ಮೂಡದ ಹಿನ್ನೆಲೆ ವಾಸಂತಾ ಕೊಡಗಿಗೆ ವಾಪಸಾಗಿದ್ದರು. 2007ರಲ್ಲಿ ಖಿನ್ನತೆಯಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇನ್ನು ಅನಾರೋಗ್ಯದಿಂದಾಗಿ 2015ರಲ್ಲಿ ರಂಗಪ್ರಸಾದ್ ಅವರ ಮಗ ಶ್ರೀವತ್ಸ ಕೂಡ ಸಾವನ್ನಪ್ಪಿದ್ದರು.
ಈಗ ಸುಜಾತಾ ಭಟ್ ಅದೇ ವಾಸಂತಿಯ ಪೋಟೋವನ್ನು ತೋರಿಸಿ, ಈಕೆ ನನ್ನ ಮಗಳು ಅನನ್ಯಾ ಭಟ್ ಎಂದು ರಿಲೀಸ್ ಮಾಡಿದ್ದಾರೆ. ವಸಂತಾ ತೀರಿಕೊಂಡು 18 ವರ್ಷ ಈಗಾಗಲೇ ಕಳೆದಿದೆ. ಹೀಗಾಗಿ ಆಕೆಯ ಅಸಲಿಯತ್ತಿನ ಬಗ್ಗೆ ಯಾರೂ ಕೇಳಲ್ಲ ಎಂದು ಸುಜಾತಾ ವಸಂತಿಯ ಫೋಟೋ ರಿಲೀಸ್ ಮಾಡಿದ್ದಾರೆ. ಆದರೆ ಸುಜಾತಾ ರಿಲೀಸ್ ಮಾಡಿದ್ದು ವಾಸಂತಿಯ 20 ವರ್ಷ ಆಸುಪಾಸಿನ ಫೋಟೋ ಎನ್ನಲಾಗಿದೆ.
ಸುಜಾತಾ ಭಟ್ ಮಗಳ ಫೋಟೋ ಎಂದು ಹೇಳಿ ರಿಲೀಸ್ ಮಾಡಿದ ಬಳಿಕ ಎಸ್‌ಐಟಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದರು. ಆದರೆ ಈಗ ಫೋಟೋ ಅಸಲಿಯತ್ತು ಬಹಿರಂಗವಾಗಿದ್ದು ಕೇಸ್‌ಗೆ ದೊಡ್ಡ ಟ್ವಿಸ್ಟ್ ಸಿಕ್ಕಂತಾಗಿದೆ. ಮತ್ತೊಂದೆಡೆ ಈ ಕೇಸ್ ಅಧಿಕಾರಿಗಳಿಗೂ ಗೊಂದಲಗಳೊಂದಿಗೆ ತಲೆನೋವು ಎನಿಸಿಕೊಂಡಿದೆ.