ಮಂಗಳೂರು (ದಕ್ಷಿಣ ಕನ್ನಡ): ಡ್ರಗ್ಸ್ ಫ್ರಿ ಮಂಗಳೂರು ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಗೋವಾದಿಂದ ಮಂಗಳೂರು ನಗರಕ್ಕೆ ಹಾಗೂ ಕೇರಳಕ್ಕೆ ರಾಜ್ಯಕ್ಕೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಗೋವಾದಿಂದ ಮಂಗಳೂರು ನಗರಕ್ಕೆ ಹಾಗೂ ಕೇರಳ ರಾಜ್ಯಕ್ಕೆ ಲಕ್ಷಾಂತರ ಬೆಲೆಬಾಳುವ ನಿಷೇಧಿತ ಮಾದಕ ವಸ್ತುವಾದ ಹೈಡ್ರೋವಿಡ್ ಗಾಂಜಾವನ್ನು ಕಾರಿನಲ್ಲಿ ಸಾಗಾಟ ಮಾಡಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರು ನಗರದ ಬಪ್ಪನಾಡು ರಾಷ್ಟ್ರೀಯ ಹೆದ್ದಾರಿ ಬಳಿ ಕಾರೊಂದನ್ನು ಪತ್ತೆ ಹಚ್ಚಿ ಅಕ್ರಮವಾದ ಹೈಡ್ರೋವಿಡ್ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಶಮೀರ್ ಎಂಬಾತನನ್ನು ವಶಕ್ಕೆ ಪಡೆದುಕೊಂಡು ಆತನ ವಶದಿಂದ 73 ಲಕ್ಷ ರೂಪಾಯಿ ಮೌಲ್ಯದ 738 ಗ್ರಾಂ ಹೈಡ್ರೋವಿಡ್ ಗಾಂಜಾ, ಸಾಗಾಟಕ್ಕೆ ಉಪಯೋಗಿಸಿದ KL-76-B-2296 ನೊಂದಣಿ ನಂಬ್ರದ ಕೆಂಪು ಬಣ್ಣದ ಹುಂಡೈ ಕಂಪೆನಿಯ ಕಾರು, ಮೊಬೈಲ್ ಫೋನ್ ನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯಿಂದ ವಶಪಡಿಸಿಕೊಂಡ ಸೊತ್ತಿನ ಮೌಲ್ಯ ರೂ. 80,10,000/- ಆಗಬಹುದು. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಹೈಡ್ರೋವಿಡ್ ಗಾಂಜಾವನ್ನು ವಿದೇಶದಿಂದ ತಂದಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.